ನವ ದೆಹಲಿ: ತಿರುಪತಿಯ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದ ನಿವ್ವಳ ಲಾಭ 2.5 ಲಕ್ಷ ಕೋಟಿ ರೂಪಾಯಿ (30 ಬಿಲಿಯನ್ ಯುಎಸ್ ಡಾಲರ್) ಎಂದು ಹೇಳಲಾಗಿದೆ. ಐಟಿ ದಿಗ್ಗಜ ಕಂಪನಿ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ, ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ಇಂಡಿಯನ್ ಆಯ್ಲ್ ಕಾರ್ಪೋರೇಶನ್(IOC)ನ ನಿವ್ವಳ ಮೌಲ್ಯಕ್ಕಿಂತಲೂ ಹೆಚ್ಚು ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಘೋಷಿಸಿದೆ. 1933ರಲ್ಲಿ ಸ್ಥಾಪಿತವಾದ ಬಳಿಕ ಇದೇ ಮೊದಲ ಬಾರಿಗೆ ಟಿಟಿಡಿ, ದೇವಸ್ಥಾನದ ನಿವ್ವಳ ಮೌಲ್ಯವನ್ನು ಘೋಷಣೆ ಮಾಡಿದೆ.
ದೇವಸ್ಥಾನದ ಒಟ್ಟಾರೆ ಆಸ್ತಿಯಲ್ಲಿ 10.25 ಟನ್ ಚಿನ್ನ ಇದ್ದು, ಅದನ್ನು ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ. ಹಾಗೇ, 2.5 ಟನ್ಗಳಷ್ಟು ಚಿನ್ನದ ಆಭರಣಗಳು ಇವೆ. 16 ಸಾವಿರ ಕೋಟಿ ರೂಪಾಯಿಗಳಷ್ಟು ಬ್ಯಾಂಕ್ನಲ್ಲಿ ಡಿಪೋಸಿಟ್ ಇಡಲಾಗಿದೆ. ದೇಶಾದ್ಯಂತ 960 ಸ್ವತ್ತುಗಳಿವೆ. ಎಲ್ಲವುಗಳ ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂಪಾಯಿ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಾಹಿತಿ ನೀಡಿದೆ.
ತಿರುಪತಿ ದೇವಸ್ಥಾನದ ಸದ್ಯದ ಮಾರುಕಟ್ಟೆ ವಹಿವಾಟು ಮೌಲ್ಯ, ದೇಶದ ಹಲವು ಬ್ಲ್ಯೂ ಚಿಪ್ ಕಂಪನಿಗಳ ವಹಿವಾಟು ಮೌಲ್ಯಕ್ಕಿಂತಲೂ ಹೆಚ್ಚಿದೆ. ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮಾರುಕಟ್ಟೆ ಮೌಲ್ಯ 2.14 ಲಕ್ಷ ಕೋಟಿ ರೂಪಾಯಿ. ಹಾಗೇ, ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ 1.99 ಲಕ್ಷ ಕೋಟಿ ರೂ.ಮಾರುಕಟ್ಟೆ ಮೌಲ್ಯ ಹೊಂದಿದೆ. ಇನ್ನು ಸ್ವಿಸ್ ಮೂಲದ ಆಹಾರ ಮತ್ತು ಪಾನೀಯ ದಿಗ್ಗಜ ಕಂಪನಿ ನೆಸ್ಲೆ 1.96 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದೆ.
ಇದನ್ನೂ ಓದಿ: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ; ವಿಶ್ವನಾಥ್