Site icon Vistara News

Dalit Student: ದೇಶ, ರಾಮನ ವಿರೋಧ; ದಲಿತ ಪಿಎಚ್‌.ಡಿ ವಿದ್ಯಾರ್ಥಿಯ ಅಮಾನತು!

Dalit Student

TISS suspends Dalit PhD student for 2 years for anti-national activities

ಮುಂಬೈ: ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸಸ್‌ (TISS) ಸಂಸ್ಥೆಯು ಪಿಎಚ್‌.ಡಿ ಅಧ್ಯಯನ ಮಾಡುತ್ತಿರುವ ದಲಿತ ವಿದ್ಯಾರ್ಥಿಯೊಬ್ಬನನ್ನು (Dalit Student) ಎರಡು ವರ್ಷಗಳವರೆಗೆ ಅಮಾನತು ಮಾಡಿದೆ. ದೇಶ ಹಾಗೂ ಭಗವಾನ್‌ ಶ್ರೀರಾಮನ ವಿರುದ್ಧದ ಕೃತ್ಯಗಳಿಂದಾಗಿ ರಾಮದಾಸ್‌ ಪ್ರಿನಿ ಶಿವನದನ್‌ (Ramadas Prini Sivanadan) ಎಂಬ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗ ಟಿಐಎಸ್‌ಎಸ್‌ ಕ್ರಮದ ಕುರಿತು ಪರ-ವಿರೋಧ ಚರ್ಚೆಯಾಗುತ್ತಿವೆ. ಕೆಲ ವಿದ್ಯಾರ್ಥಿ ಸಂಘಟನೆಗಳು ಟಿಐಎಸ್‌ಎಸ್‌ ಕ್ರಮವನ್ನು ಖಂಡಿಸಿವೆ.

ಕೇರಳದ ವಯನಾಡು ಮೂಲದ ರಾಮದಾಸ್‌ ಪ್ರಿನಿ ಶಿವನದನ್‌ ಎಂಬಾತನನ್ನು ಎರಡು ವರ್ಷಗಳವರೆಗೆ ಅಮಾನತುಗೊಳಿಸಿ ಸಂಸ್ಥೆಯ ಆಡಳಿತ ಮಂಡಳಿಯು ಆದೇಶ ಹೊರಡಿಸಿದೆ. ಮುಂಬೈನಲ್ಲಿರುವ ಟಿಐಎಸ್‌ಎಸ್‌ ಕ್ಯಾಂಪಸ್‌ನಲ್ಲಿ ಈತನು ಡೆವಲಪ್‌ಮೆಂಟ್‌ ಸ್ಟಡೀಸ್‌ ವಿಭಾಗದಲ್ಲಿ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದ. ಈತನ ಅಮಾನತು ಮಾತ್ರವಲ್ಲ, ಕ್ಯಾಂಪಸ್‌ ಪ್ರವೇಶಕ್ಕೂ ಆಡಳಿತ ಮಂಡಳಿಯು ನಿರ್ಬಂಧ ವಿಧಿಸಿದೆ.

ಟಿಐಎಸ್‌ಎಸ್‌ ಹೇಳುವುದೇನು?

ಟಿಐಎಸ್‌ಎಸ್‌ ಕ್ಯಾಂಪಸ್‌ನಲ್ಲಿ ಒಬ್ಬ ವಿದ್ಯಾರ್ಥಿಯ ವರ್ತನೆ ಹೇಗಿರಬೇಕು ಎಂಬ ನಿಯಮಗಳ ವಿರುದ್ಧ ರಾಮದಾಸ್‌ ಪ್ರಿನಿ ಶಿವನದನ್‌ ನಡೆದುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ, ಕಳೆದ ಮಾರ್ಚ್‌ 7ರಂದು ರಾಮದಾಸ್‌ ಪ್ರಿನಿ ಶಿವನದನ್‌ಗೆ ಸಂಸ್ಥೆಯು ಶೋಕಾಸ್‌ ನೋಟಿಸ್ ಹೊರಡಿಸಿತ್ತು. ಇದಾದ ಬಳಿಕ ಅಂದರೆ, ಏಪ್ರಿಲ್‌ 18ರಂದು ರಾಮದಾಸ್‌ ಪ್ರಿನಿ ಶಿವನದನ್‌ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸಂಸ್ಥೆಯ ನಿಯಮಗಳ ವಿರುದ್ಧವಾಗಿ ನಡೆದುಕೊಂಡಿರುವುದು, ಅಶಿಸ್ತು ಸೇರಿ ಹಲವು ಕಾರಣಗಳಿಂದಾಗಿ ಅಮಾನತುಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ರಾಮದಾಸ್‌ ಪ್ರಿನಿ ಶಿವನದನ್‌ ಹಿನ್ನೆಲೆ ಏನು?

ಎಡಪಂಥೀಯ ಸಿದ್ಧಾಂತಗಳಿಂದ ಪ್ರೇರೇಪಿತವಾಗಿ ಕಟ್ಟಿರುವ ಪ್ರೊಗ್ರೆಸ್ಸಿವ್‌ ಸ್ಟುಡೆಂಟ್ಸ್‌ ಫೋರಂ (PSF) ಸಂಘಟನೆಗೆ ರಾಮದಾಸ್‌ ಪ್ರಿನಿ ಶಿವನದನ್‌ ಪ್ರಧಾನ ಕಾರ್ಯದರ್ಶಿಯಾಗಿದ್ದಾನೆ. ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆಯಲ್ಲಿ ಟಿಐಎಸ್‌ಎಸ್‌ ಸಂಸ್ಥೆಯಲ್ಲಿ ಹೆಸರಿನಲ್ಲಿ ಸಂಸತ್ತಿನ ಎದುರು ಈತನ ನೇತೃತ್ವದಲ್ಲಿಯೇ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೆ, ಶ್ರೀರಾಮನ ಕುರಿತು ಬಿಬಿಸಿಯು ಕೆಟ್ಟದಾಗಿ ಚಿತ್ರಿಸಿರುವ ಡಾಕ್ಯುಮೆಂಟರಿಯೊಂದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈತನ ವಿರುದ್ಧ ದೇಶವಿರೋಧದ ಆರೋಪ ಏಕೆ ಬಂದಿದೆ ಎಂಬುದಕ್ಕೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿ (NEP) ಜಾರಿ ಖಂಡಿಸಿಯೂ ಈತ ಪ್ರತಿಭಟನೆ ನಡೆಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ನಾಟಕದಲ್ಲಿ ಸೀತೆ ಧೂಮಪಾನ ಮಾಡುವ ದೃಶ್ಯ; ಪ್ರೊಫೆಸರ್‌ ಸೇರಿ 6 ವಿದ್ಯಾರ್ಥಿಗಳ ಬಂಧನ

Exit mobile version