ನವ ದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ತಾನೇ ಮುಂದಾಗಿ ನಿಂತು, ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸಿ ಜಂಟಿ ಅಭ್ಯರ್ಥಿ ಆಯ್ಕೆ ಮಾಡಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಇದೀಗ ಉಪರಾಷ್ಟ್ರಪತಿ ಚುನಾವಣೆ (Vice President Election)ಯಲ್ಲಿ ಮತದಾನವನ್ನೇ ಮಾಡದಿರಲು ನಿರ್ಧರಿಸಿದ್ದಾರೆ. ಕೇವಲ ಮಮತಾ ಬ್ಯಾನರ್ಜಿಯಲ್ಲ, ಇಡೀ ಟಿಎಂಸಿ ಪಕ್ಷದಲ್ಲಿ ಯಾರೊಬ್ಬ ಸಂಸದರು/ಶಾಸಕರೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಈ ಬಗ್ಗೆ ಟಿಎಂಸಿ ನಾಯಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇಂದು ಪ್ರಕಟಣೆ ಹೊರಡಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ. ತೃಣಮೂಲ ಕಾಂಗ್ರೆಸ್‌ಗೆ ಮಾರ್ಗರೆಟ್ ಆಳ್ವಾ ಆಯ್ಕೆ ಬಗ್ಗೆ ತಕರಾರು ಇಲ್ಲ. ಆದರೆ ಅವರನ್ನು ಆಯ್ಕೆ ಮಾಡಿದ ಪ್ರಕ್ರಿಯೆ ಸರಿಯಿಲ್ಲ ಎಂಬುದು ಪಕ್ಷದ ಪ್ರಮುಖರ ತಕರಾರು. ಮಾರ್ಗರೆಟ್ ಆಳ್ವಾರನ್ನು ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡುತ್ತೇವೆ ಎಂಬುದನ್ನು ನಮಗೆ ತಿಳಿಸಿಯೇ ಇಲ್ಲ. ನಮ್ಮೊಂದಿಗೆ ಚರ್ಚಿಸದೆ, ನಮ್ಮ ಗಮನಕ್ಕೆ ತರದೆ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಹಾಗಾಗಿ ನಾವು ಮತದಾನ ಮಾಡುವುದಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ.
ಇನ್ನು ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಅವರೇ ಆಗಿದ್ದರೂ ಅವರಿಗೆ ತೃಣಮೂಲ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ ಎಂಬುದು ಸ್ಪಷ್ಟ. ಜಗದೀಪ್ ಧನಕರ್ ಮತ್ತು ಮಮತಾ ಬ್ಯಾನರ್ಜಿ ನಡುವಿನ ಭಿನ್ನಾಭಿಪ್ರಾಯ, ವಾಗ್ವಾದ, ಜಟಾಪಟಿ ಜಗಜ್ಜಾಹೀರಾದ ವಿಷಯ. ʼಎನ್‌ಡಿಎ ಒಕ್ಕೂಟ ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದರೂ ನಾವು ಅವರಿಗೆ ಮತ ಹಾಕುವುದಿಲ್ಲ. ಅದರಲ್ಲೂ ಜಗದೀಪ್ ಧನಕರ್‌ಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ಹೀಗಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವುದೇ ಬೇಡವೆಂದು ಇಂದು ನಡೆದ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆʼ ಎಂದು ಅಭಿಷೇಕ್ ಬ್ಯಾನರ್ಜಿ ತಿಳಿಸಿದ್ದಾರೆ. ಜಗದೀಪ್ ಧನಕರ್ ತಮ್ಮನ್ನು ತಾವು ಸಂವಿಧಾನ-ಕಾನೂನು ಪರಿಪಾಲಕರು ಎಂಬಂತೆ ಬಿಂಬಿಸಿಕೊಂಡವರು ಮತ್ತು ಅದಕ್ಕಾಗಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ವಿಲನ್ ಮಾಡಿದ್ದಾರೆ ಎಂದೂ ಅಭಿಷೇಕ್ ಹೇಳಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆ ಆಗಸ್ಟ್ 6ರಂದು ನಡೆಯಲಿದೆ. ಜಗದೀಪ್ ಧನಕರ್ ಅವರನ್ನು ಎನ್‌ಡಿಎ ಒಕ್ಕೂಟ ಆಯ್ಕೆ ಮಾಡಿಕೊಂಡಿದ್ದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಗುಂಪು ಮಾರ್ಗರೇಟ್ ಆಳ್ವಾಗೆ ಮಣೆ ಹಾಕಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯ ಗೆಲುವೇ ನಿಶ್ಚಿತ ಎನ್ನಲಾಗುತ್ತಿದೆ. ಈಗ ಟಿಎಂಸಿ ಮತದಾನದಿಂದ ದೂರ ಇರುವುದರಿಂದ ಮಾರ್ಗರೆಟ್ ಆಳ್ವಾಗೆ ಬೀಳುವ ಮತಗಳ ಪ್ರಮಾಣ ಸಹಜವಾಗಿಯೇ ಕಡಿಮೆಯಾಗಲಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ; ರಾಹುಲ್, ಪವಾರ್ ಜತೆ ತೆರಳಿ ನಾಮಪತ್ರ ಸಲ್ಲಿಸಿದ ಮಾರ್ಗರೆಟ್ ಆಳ್ವಾ