ನವ ದೆಹಲಿ: ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಹತ್ಯೆಗೂ ಭಾರತದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ಗೂ ಎಲ್ಲಿಂದೆಲ್ಲಿಯ ನಂಟು?- ಶಿಂಜೊ ಅಬೆಗೆ ನಿನ್ನೆ ಮಾಜಿ ಯೋಧನೊಬ್ಬ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ. ಈತ ಜಪಾನ್ ಕಡಲ ಸ್ವಯಂ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದ. 2005ರಲ್ಲಿ ಹುದ್ದೆ ತೊರೆದಿದ್ದ. ಇದೆಲ್ಲ ವಿಷಯವನ್ನಿಟ್ಟುಕೊಂಡು ತೃಣಮೂಲ ಕಾಂಗ್ರೆಸ್‌ನ ಮುಖವಾಣಿ ʼಜಾಗೋ ಬಾಂಗ್ಲಾʼ ಸುದೀರ್ಘ ಲೇಖನ ಬರೆದಿದೆ. ಅದರಲ್ಲಿ ಶಿಂಜೊ ಅಬೆ ಹತ್ಯೆಗೂ, ಅಗ್ನಿಪಥ್ ಯೋಜನೆಗೂ ಲಿಂಕ್ ಕಲ್ಪಿಸಿದೆ. ಅಷ್ಟೇ ಅಲ್ಲ, ಅದಕ್ಕೆ ʼಶಿಂಜೊ ಹತ್ಯೆಯಲ್ಲಿ ಅಗ್ನಿಪಥ್ ನೆರಳುʼ ಎಂಬ ತಲೆಬರಹವನ್ನೂ ನೀಡಿದೆ!
ಅಗ್ನಿಪಥ್ ಎಂಬ ಸೇನಾ ನೇಮಕಾತಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಈ ಯೋಜನೆಯಡಿ ಯುವಜನರು 4 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅದಾದ ಮೇಲೆ ಶೇ. 25ರಷ್ಟು ಯೋಧರು ಮಾತ್ರ ಸೇನೆಯಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಉಳಿದ ಶೇ.75ರಷ್ಟು ಅಗ್ನಿವೀರರು ನಿವೃತ್ತರಾಗುತ್ತಾರೆ. ಹೀಗೆ ನಿವೃತ್ತರಾದವರಿಗೆ ನಿವೃತ್ತಿ ಬಳಿಕ ಪಿಂಚಣಿ ನೀಡುವ ವ್ಯವಸ್ಥೆ ಇರುವುದಿಲ್ಲ. ಈ ಯೋಜನೆಯನ್ನು ಹಲವು ಕಾರಣಗಳಿಂದ ಭಾರತದಲ್ಲಿ ಈಗಾಗಲೇ ವಿರೋಧಿಸಲಾಗುತ್ತಿದೆ. ಇಂಥ ಅಗ್ನಿಪಥ್ ಯೋಜನೆಗೂ-ಶಿಂಜೊ ಅಬೆಯವರ ಹತ್ಯೆಗೂ ಟಿಎಂಸಿ ಮುಖವಾಣಿ ಲಿಂಕ್ ಕಲ್ಪಿಸಿದ್ದು ಹೇಗೆ?..ಇಲ್ಲಿದೆ ಮಾಹಿತಿ
ಇದನ್ನೂ ಓದಿ: ಶಿಂಜೊ ಅಬೆಯಂತೆಯೇ ಹತ್ಯೆಯಾದ ಜಗತ್ತಿನ ಹತ್ತು ನಾಯಕರಿವರು
ʼಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ಭಾರತದಲ್ಲಿ ಅಗ್ನಿಪಥ್ ಯೋಜನೆ ವಿರೋಧಿ ಪ್ರತಿಭಟನೆಯನ್ನು ಇನ್ನಷ್ಟು ಬಲಗೊಳಿಸಲಿದೆ. ಯಾಕೆಂದರೆ ಶಿಂಜೊರನ್ನು ಹತ್ಯೆ ಮಾಡಿದ ಆರೋಪಿ ಒಬ್ಬ ಮಾಜಿ ಸೈನಿಕ. ಇವನೂ ಕೂಡ ಜಪಾನ್ ಭದ್ರತಾ ಪಡೆಯಲ್ಲಿ ಗುತ್ತಿಗೆ ಆಧಾರದಲ್ಲಿಯೇ ಕೆಲಸ ಮಾಡುತ್ತಿದ್ದ. ಹೀಗಾಗಿ ನಿವೃತ್ತನಾದ ಮೇಲೆ ಅವನಿಗೆ ಪಿಂಚಣಿ ಹಣ ಬರುತ್ತಿರಲಿಲ್ಲ. ಹೀಗಿರುವಾಗ ಭಾರತದಲ್ಲಿಯೂ ಕೂಡ ಕೇಂದ್ರ ಸರ್ಕಾರ ಪಿಂಚಣಿ ವ್ಯವಸ್ಥೆಯನ್ನು ಒಳಗೊಂಡಿರದ ಅಗ್ನಿಪಥ್ ಯೋಜನೆ ತರಲು ಮುಂದಾಗುತ್ತಿದೆ. ಅಗ್ನಿಪಥ್‌ನ್ನು ಈಗಾಗಲೇ ತುಂಬ ಹಿಂಸಾತ್ಮಕವಾಗಿ ವಿರೋಧಿಸಲಾಗಿದೆ. ಇದು ಇನ್ನಷ್ಟು ಬಲಗೊಳಿಸಬಹುದುʼ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ʼಶಿಂಜೊ ಹತ್ಯೆ ಮಾಡಿದ ಯಮಗಾಮಿ ಟೆಟ್ಸುಯಾ ಭದ್ರತಾ ಪಡೆಯನ್ನು ಬಿಟ್ಟ ಮೇಲೆ ಆತನಿಗೆ ಇನ್ನೆಲ್ಲೂ ಕೆಲಸ ಸಿಕ್ಕಿರಲಿಲ್ಲ. ಪಿಂಚಣಿಯೂ ಬರುತ್ತಿರಲಿಲ್ಲ. ಇದರಿಂದಾಗಿ ಆತ ಕೋಪಗೊಂಡಿದ್ದʼ ಎಂದು ಟಿಎಂಸಿ ಮುಖವಾಣಿ ಹೇಳಿದೆ. ಅಷ್ಟೇ ಅಲ್ಲ, ʼತಾನು ಕೆಲಸ ಕಳೆದುಕೊಂಡಾಗಿನಿಂದಲೂ ಶಿಂಜೊ ಅಬೆ ಮೇಲೆ ಸಿಟ್ಟಿತ್ತು ಎಂದು ಪೊಲೀಸರ ಎದುರು ಯಮಗಾಮಿ ಹೇಳಿಕೊಂಡಿದ್ದಾನೆʼ ಎಂದೂ ಉಲ್ಲೇಖಿಸಲಾಗಿದೆ. ಆದರೆ ಜಪಾನ್ ಪೊಲೀಸರು ಹೇಳಿರುವ ಪ್ರಕಾರ, ಯಮಗಾಮಿ ಟೆಟ್ಸುಯಾ ಸ್ವಯಂ ರಕ್ಷಣಾ ಪಡೆಯಲ್ಲಿ ಕೆಲಸ ಬಿಟ್ಟ ಬಳಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2020ರಲ್ಲಿ ಆರೋಗ್ಯ ಸಮಸ್ಯೆಯಿಂದ ಆತ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಶಿಂಜೊ ಅಬೆ ಸಾವು ಸಂಭ್ರಮಿಸಿದ ಚೀನಾ ಪ್ರಜೆಗಳು; ಈಗಿನ ಪ್ರಧಾನಿ ಸರದಿ ಯಾವಾಗ ಎಂಬ ಪ್ರಶ್ನೆ