Site icon Vistara News

Mimi Chakraborty: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಟಿಎಂಸಿ ಸಂಸದೆ, ನಟಿ ಮಿಮಿ ಚಕ್ರವರ್ತಿ

TMC MP and actress Mimi Chakraborty has resigned as MP

ನವದೆಹಲಿ: ತೃಣಮೂಲ ಕಾಂಗ್ರೆಸ್ (TMC MP) ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿ (Mimi Chakraborty) ಅವರು ತಮ್ಮ ಲೋಕಸಭಾ ಸಂಸದ ಸ್ಥಾನಕ್ಕೆ ಗುರುವಾರ ರಾಜೀನಾಮೆ (Resigned To MP) ನೀಡಿದ್ದಾರೆ. ಜಾಧವಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದಿದ್ದ ಮಿಮಿ ಅವರು, ಪಕ್ಷದೊಳಗಿನ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಈ ಕುರಿತು ಮುಖ್ಯಮಂತ್ರಿಯೂ ಆಗಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇನ್ನೂ ಅವರು ರಾಜೀನಾಮೆಗೆ ತಮ್ಮ ಒಪ್ಪಿಗೆಯನ್ನು ನೀಡಿಲ್ಲ.

ವಿಧಾನಸಭೆಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ನಂತರ ಜಾದವ್‌ಪುರ ಸಂಸದರು, “ನಾನು ಎರಡು ದಿನಗಳ ಹಿಂದೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಅದನ್ನು ದೀದಿಗೆ ಕಳುಹಿಸಿದೆ. ಆದರೆ ಅವರು ಅದನ್ನು ಇನ್ನೂ ಒಪ್ಪಿಕೊಂಡಿಲ್ಲ. ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂದು ನೋಡೋಣ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಮಿಮಿ ಚಕ್ರವರ್ತಿ ಅವರು ಹೇಳಿದ್ದಾರೆ.

ರಾಜಕೀಯ ನನಗಲ್ಲ. ನೀವು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ, ನೀವು ಯಾರನ್ನಾದರೂ ಇಲ್ಲಿ ಪ್ರಮೋಟ್ (ರಾಜಕೀಯದಲ್ಲಿ) ಪ್ರಚಾರ ಮಾಡಬೇಕು … ರಾಜಕಾರಣಿಯಾಗಿರುವುದರ ಜೊತೆಗೆ, ನಾನು ನಟಿಯೂ ಆಗಿಯೂ ಕೆಲಸ ಮಾಡಬೇಕಾಗುತ್ತದೆ. ನನಗೆ ಸಮಾನ ಜವಾಬ್ದಾರಿಗಳಿವೆ. ರಾಜಕೀಯಕ್ಕೆ ಸೇರಿದರೆ ಕೆಲಸ ಮಾಡದಿದ್ದರೂ ಟೀಕಿಸುತ್ತಾರೆ. ನನಗಿರುವ ಸಮಸ್ಯೆಗಳ ಬಗ್ಗೆ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದ್ದೇನೆ. 2022ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅವರಿಗೂ ಹೇಳಿದ್ದೆ. ಆ ಸಮಯದಲ್ಲಿ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಮಿಮಿ ಚಕ್ರವರ್ತಿ ಅವರು ಹೇಳಿದ್ದಾರೆ.

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಪತ್ರವನ್ನು ಲೋಕಸಭಾ ಸ್ಪೀಕರ್‌ ಅವರಿಗೆ ಸಲ್ಲಿಸಬೇಕು. ಆದರೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೇಕೆ ಸಲ್ಲಿಸಿದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಮಿಮಿ ಚಕ್ರವರ್ತಿ ಅವರು, ನಾನು ಟಿಎಂಸಿಯಿಂದ ಒಪ್ಪಿಗೆ ಪಡೆದ ನಂತರ, ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿಶೇಷ ಎಂದರೆ, ಇತ್ತೀಚೆಗಷ್ಟೇ ಅವರು ಎರಡು ಸಂಸದೀಯ ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೂ ಮಿಮಿ ಚಕ್ರವರ್ತಿ ಅವರು ರಾಜೀನಾಮೆ ನೀಡಿದ್ದಾರೆ. ಇಂಧನ ಮತ್ತು ನವೀಕರಿಸಬಹುದಾದ ಶಕ್ತಿಯ ಜಂಟಿ ಸಮಿತಿ ಹಾಗೂ ಉದ್ಯಮ ಸ್ಥಾಯಿ ಸಮಿತಿಗಳಿಗೆ ಸದಸ್ಯರಾಗಿದ್ದರು. ಈಗ ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: CM Mamata Banerjee: ಕಾರು ಅಪಘಾತದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ

Exit mobile version