Site icon Vistara News

Mimicry Row: ಮತ್ತೆ ಉಪ ರಾಷ್ಟ್ರಪತಿಯನ್ನು ಮಿಮಿಕ್ರಿ ಮಾಡಿದ ಟಿಎಂಸಿ ಸಂಸದ; ತಪ್ಪೇನು ಎಂದು ಉದ್ಧಟತನ

kalyan banerjee

TMC MP Kalyan Banerjee mimics V-P Jagdeep Dhankhar again; Asks What's Wrong

ಕೋಲ್ಕೊತಾ: ರಾಜ್ಯಸಭೆ ಸ್ಪೀಕರ್‌, ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರನ್ನು ಮಿಮಿಕ್ರಿ ಮಾಡುವ ಮೂಲಕ ವಿವಾದಕ್ಕೆ (Mimicry Row) ಗುರಿಯಾಗಿರುವ ತೃಣಮೂಲ ಕಾಂಗ್ರೆಸ್‌ (TMC) ಸಂಸದ ಕಲ್ಯಾಣ್‌ ಬ್ಯಾನರ್ಜಿ (Kalyan Banerjee) ಅವರೀಗ ಮತ್ತೆ ಉಪ ರಾಷ್ಟ್ರಪತಿಯವರನ್ನು ಅಣಕಿಸಿದ್ದಾರೆ. ಕೋಲ್ಕೊತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಗದೀಪ್‌ ಧನ್‌ಕರ್‌ (Jagdeep Dhankhar) ಅವರನ್ನು ಮಿಮಿಕ್ರಿ ಮಾಡಿದ್ದಾರೆ. ಹಾಗೆಯೇ, “ನಾನು ಮಾಡಿರುವುದರಲ್ಲಿ ತಪ್ಪೇನಿದೆ? ಹಾಸ್ಯ ಮನೋಭಾವ ಇರದವರು ಮಾತ್ರ ನನ್ನ ವರ್ತನೆಯನ್ನು ಸ್ವೀಕರಿಸಲ್ಲ” ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.

ಪಶ್ಚಿಮ ಬಂಗಾಳದ ಶ್ರೀರಾಮ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡರು. ಇದೇ ವೇಳೆ ಅವರು ಜಗದೀಪ್‌ ಧನ್‌ಕರ್‌ ಅವರಂತೆ ಅಣಕಿಸಿದರು. ಹಾಗೆಯೇ, “ನಾನು ಮಿಮಿಕ್ರಿ ಮಾಡುತ್ತೇನೆ. ಇದೊಂದು ಕಲೆಯ ಪ್ರಕಾರವಾಗಿದೆ. ಹಾಗೊಂದು ವೇಳೆ ಅವಶ್ಯಕತೆ ಬಿದ್ದರೆ ಇನ್ನೂ ಸಾವಿರ ಸಲ ಮಿಮಿಕ್ರಿ ಮಾಡುತ್ತೇನೆ. ನನ್ನ ಅಭಿಪ್ರಾಯವನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ನನಗಿರುವ ಸ್ವಾತಂತ್ರ್ಯವಾಗಿದೆ. ನನ್ನನ್ನು ಜೈಲಿಗೆ ಹಾಕಿದರೂ ಹಿಂದಡಿ ಇಡುವುದಿಲ್ಲ” ಎಂದು ಹೇಳಿದರು.

ಮೊದಲು ಮಿಮಿಕ್ರಿ ಮಾಡಿದ್ದ ವಿಡಿಯೊ

“ನಾನು ಹಾಸ್ಯಕ್ಕಾಗಿ ಹಾಗೆ ಮಾಡಿದೆ. ಕಲೆಯನ್ನು ಅರ್ಥ ಮಾಡಿಕೊಳ್ಳದವರಿಗೆ ನಾನೇನು ಮಾಡಲು ಸಾಧ್ಯ? ಒಂದಷ್ಟು ಜನ ಹಾಸ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಸುಸಂಸ್ಕೃತ ಮನಸ್ಥಿತಿಯನ್ನು ಹೊಂದಿರದಿದ್ದರೆ, ತಮ್ಮನ್ನೇ ತಾವು ಗುರಿಯಾಗಿಸಿಕೊಂಡರೆ ನಾನೇನು ಮಾಡಲಿ? ಅಂತಹ ಮನಸ್ಥಿತಿಯವರ ಬಗ್ಗೆ ನಾನು ಅಸಹಾಯಕನಾಗಿದ್ದೇನೆ. ಅಷ್ಟಕ್ಕೂ ಅವರೇಕೆ ಹಗಲು-ರಾತ್ರಿ ಹಾಗೆ ಕಣ್ಣೀರಿಡುತ್ತಿದ್ದಾರೆ? ಯಾಕೆ ಅವರು ನರೇಂದ್ರ ಮೋದಿ ಅವರನ್ನು ಅಷ್ಟು ಓಲೈಸುತ್ತಿದ್ದಾರೆ” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: INDIA Bloc Protest: ಬಿಜೆಪಿ ಸಂಸದರು ಹೆದರಿ ಓಡಿ ಹೋಗಿದ್ದರು! ರಾಹುಲ್ ಗಾಂಧಿ ಲೇವಡಿ

ಡಿಸೆಂಬರ್‌ 13ರಂದು ಸಂಸತ್ತಿನಲ್ಲಿ ಭದ್ರತಾ ಲೋಪ ಉಂಟಾಗಿದ್ದನ್ನು ಪ್ರಶ್ನಿಸಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ, ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕಲ್ಯಾಣ್‌ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಅವರನ್ನು ಅಣಕಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಾಗೆಯೇ, 140ಕ್ಕೂ ಹೆಚ್ಚು ಸಂಸದರನ್ನು ಲೋಕಸಭೆ ಹಾಗೂ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೆ ಕಲ್ಯಾಣ್‌ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಅವರನ್ನು ಮತ್ತೆ ಮಿಮಿಕ್ರಿ ಮಾಡಿದ್ದಾರೆ. ಆದರೆ, ಕಲ್ಯಾಣ್‌ ಬ್ಯಾನರ್ಜಿ ಅವರ ವರ್ತನೆಯನ್ನು ಪ್ರತಿಪಕ್ಷಗಳ ಸದಸ್ಯರು ಸಮರ್ಥಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version