ನವ ದೆಹಲಿ: ಅಂತರ್ಜಾಲ ಬಂಧಿಗಳು ಅಥವಾ ನೆಟ್ಟಿಗರು ಭಯಂಕರ ಚುರುಕು ಕಣ್ಣಿನವರು. ಒಬ್ಬ ಸಾಮಾನ್ಯ ಮನುಷ್ಯನ್ನು ರಾತ್ರಿ ಕಳೆಯುವುದರೊಳಗೆ ದೊಡ್ಡ ಸಿಲಿಬ್ರಿಟಿ ಮಾಡಬಲ್ಲರು. ಅಷ್ಟೇ ಅಲ್ಲ, ಸಮಾಜದ ಉನ್ನತ ಸ್ತರದಲ್ಲಿ ಇರುವವರನ್ನು ಒಂದೇ ಕ್ಷಣದಲ್ಲಿ ಮೂಲೆಗುಂಪು ಕೂಡ ಮಾಡಬಲ್ಲರು.! ಒಟ್ಟಾರೆ ಈ ನೆಟ್ಟಿಗರ ಹದ್ದಿನ ಕಣ್ಣಿನಿಂದ ಪಾರಾಗುವುದು ಅಷ್ಟು ಸುಲಭವಲ್ಲ. ಇದೀಗ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ನೆಟ್ಟಿಗರ ಟ್ರೋಲ್ಗೆ ಆಹಾರವಾಗಿದ್ದಾರೆ. ಮೊಯಿತ್ರಾ ಲೋಕಸಭೆಯಲ್ಲಿ ಮಾಡಿದ ಒಂದು ಸಣ್ಣ ಕೆಲಸದ ವಿಡಿಯೋ ಈಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ತುಂಬ ಜನ ವಿಡಿಯೋ ಶೇರ್ ಮಾಡಿಕೊಂಡು ಸಂಸದೆಯ ಕಾಲೆಳೆಯುತ್ತಿದ್ದಾರೆ.
ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಕಕೋಲಿ ಘೋಷ್ ದಸ್ತಿದಾರ್ ಮತ್ತು ಮಹುವಾ ಮೊಯಿತ್ರಾ ಅಕ್ಕಪಕ್ಕ ಕುಳಿತಿದ್ದರು. ಅವರಲ್ಲಿ ದಸ್ತಿದಾರ್ ಎದ್ದುನಿಂತು ಬೆಲೆ ಏರಿಕೆ ವಿರೋಧಿ ಮಾತುಗಳನ್ನು ಪ್ರಾರಂಭಿಸಿದರು. ಇದೇ ವಿಷಯ ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡತೊಡಗಿದರು. ಆ ಕ್ಷಣದಲ್ಲಿ ಮಹುವಾ ಮೊಯಿತ್ರಾ ತಮ್ಮ ದುಬಾರಿ ಬ್ಯಾಗ್ನ್ನು ಅಡಗಿಸಿಟ್ಟರು. ಮೊಹುವಾ ತಮ್ಮ ಪಕ್ಕದಲ್ಲೇ, ಸೀಟ್ ಮೇಲೆ ಲೂಯಿ ವಿಟಾನ್ ಟೋಟೆ ಬ್ರ್ಯಾಂಡ್ನ ಬ್ಯಾಗ್ನ್ನು ಇಟ್ಟುಕೊಂಡು ಕುಳಿತಿದ್ದರು. ಇದೊಂದು ದುಬಾರಿ ಬ್ಯಾಗ್. ಯಾವಾಗ ಕಕೋಲಿ ಘೋಷ್ ಬೆಲೆ ಏರಿಕೆ ಬಗ್ಗೆ ಮಾತೆತ್ತಿದರೋ, ಆಗ ಅಷ್ಟೇ ತ್ವರಿತವಾಗಿ ಮೊಯಿತ್ರಾ ಆ ಪುಟ್ಟ ಬ್ಯಾಗ್ನ್ನು ತೆಗೆದು, ಟೇಬಲ್ ಕೆಳಗೆ ಇಟ್ಟರು. ಅವರೇನು ನಿಜವಾಗಿಯೂ ಅಡಗಿಸಿಟ್ಟರೋ, ಅಥವಾ ಆ ಹೊತ್ತಿಗೆ ಬ್ಯಾಗ್ ಕೆಳಗೆ ಇಟ್ಟಿದ್ದರಿಂದ ನೋಡುಗರಿಗೆ ಹಾಗನ್ನಿಸಿತೋ? ಒಟ್ಟಾರೆ ಇದೀಗ ಇಂಟರ್ನೆಟ್ನಲ್ಲಿ ಮೊಯಿತ್ರಾ ಟ್ರೋಲ್ ಆಗುತ್ತಿದ್ದಾರೆ.
ವಿಡಿಯೋವನ್ನು ಅಜಿತ್ ದತ್ತಾ ಎಂಬುವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘mehengai (ಬೆಲೆ ಏರಿಕೆ ವಿಷಯ ಶುರುವಾಗುತ್ತಿದ್ದಂತೆ, ಕೆಲವರು ತಮ್ಮ ಬ್ಯಾಗ್ನ್ನು ಬೆಂಚ್ನಡಿ ಇಟ್ಟರು’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಮಹುವಾ ಮೊಯಿತ್ರಾ ಬಳಿ ಇರುವ ಆ ಬ್ಯಾಗ್ ಬೆಲೆ ಏನಿಲ್ಲವೆಂದರೂ 2 ಲಕ್ಷ ರೂಪಾಯಿ ಎಂದೇ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಿಂದೊಮ್ಮೆ ಚಿತ್ರನಟಿ ಸಮಂತಾ ಇದೇ ಬ್ರ್ಯಾಂಡ್ನ, ಇದೇ ಮಾದರಿಯ ಬ್ಯಾಗ್ ಹಿಡಿದುಕೊಂಡ ಫೋಟೋ ವೈರಲ್ ಆಗಿತ್ತು. ಅದರ ಬೆಲೆ ಕೂಡ ಅಂದಾಜು 2 ಲಕ್ಷ ರೂಪಾಯಿ ಆಗಿತ್ತು. ‘ಬೆಲೆ ಏರಿಕೆಯಿಂದ ಕಷ್ಟವಾಗುತ್ತದೆ ಎಂದು ಭಯಂಕರ ಕಾಳಜಿ ಇರುವವರಂತೆ ಮಾತನಾಡುವವರೆಲ್ಲ ಬ್ಯಾಗ್ ಕೂಡ ಲಕ್ಷಾಂತರ ರೂಪಾಯಿದು ತಂದಿಟ್ಟುಕೊಳ್ಳುತ್ತಾರೆ’ ಎಂಬ ಟೀಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ: ಕಾಳಿ ಪೋಸ್ಟರ್ ವಿವಾದ; ಟಿಎಂಸಿ ಟ್ವಿಟರ್ ಖಾತೆ ಅನ್‌ಫಾಲೋ ಮಾಡಿದ ಸಂಸದೆ ಮಹುವಾ ಮೊಯಿತ್ರಾ