Site icon Vistara News

ಸಂದೇಶ್‌ಖಾಲಿ ಹಿಂಸಾಚಾರ; ಟಿಎಂಸಿಯ ಶೇಖ್‌ ಶಹಜಹಾನ್‌ ಬಂಧನಕ್ಕೆ ಹೈಕೋರ್ಟ್‌ ಆದೇಶ

Sheikh Shahjahan

ಕೋಲ್ಕೊತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ (TMC) ನಾಯಕ ಶೇಖ್‌ ಶಹಜಹಾನ್‌ನನ್ನು (Sheikh Shahjahan) ಬಂಧಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ (Calcutta High Court) ಆದೇಶಿಸಿದೆ. ಸಂದೇಶ್‌ಖಾಲಿಯಲ್ಲಿ (Sandeshkhali Case) ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಂಡ ಆರೋಪದಲ್ಲಿ ತಲೆಮರೆಸಿಕೊಂಡಿರುವ ಶೇಖ್‌ ಶಹಜಹಾನ್‌ ಬಂಧನಕ್ಕೆ ತಡೆ ನೀಡುವುದಿಲ್ಲ. ಹಾಗೆಯೇ, ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌ ಆದೇಶಿಸಿದೆ. ಇದರಿಂದಾಗಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.

ಬುಡಕಟ್ಟು, ದಲಿತ ಸಮುದಾಯದ ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಅವರ ಭೂಮಿ ಅತಿಕ್ರಮಣ ಸೇರಿ ಹಲವು ಪ್ರಕರಣಗಲ್ಲಿ ಬೇಕಾಗಿರುವ ಶೇಖ್‌ ಜಹಾನ್‌ ವಿರುದ್ಧ ಸ್ವಯಂಪ್ರೇರಿತವಾಗಿ (ಸುಮೋಟೊ) ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು ಎಂದು ಕೂಡ ಇ.ಡಿ ಹಾಗೂ ಸಿಬಿಐಗೆ ಕೋಲ್ಕೊತಾ ಹೈಕೋರ್ಟ್‌ ನಿರ್ದೇಶನ ನೀಡಿದೆ. ಶೇಖ್‌ ಜಹಾನ್‌ ಪರಾರಿಯಾಗಿರುವ ಕುರಿತು, ಆತನ ವಿರುದ್ಧ ದಾಖಲಾಗಿರುವ ಕೇಸ್‌ಗಳ ಕುರಿತು ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು ಎಂದು ಕೂಡ ಕೋರ್ಟ್‌ ಸೂಚಿಸಿದೆ.

Calcutta High Court

ಏನಿದು ಪ್ರಕರಣ?

ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯು ಫೆಬ್ರವರಿ 14ರಿಂದಲೂ ಹಿಂಸಾಚಾರದಲ್ಲಿ ಮುಳುಗಿದೆ. ತೃಣಮೂಲ ನಾಯಕ ಶಹಜಹಾನ್‌ನ ಇಬ್ಬರು ನಿಕಟ ಸಹಚರರು ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಪೊಲೀಸರಿಗೆ ಬೇಕಾಗಿದ್ದಾರೆ. ಇದೇ ಪ್ರದೇಶದಲ್ಲಿರುವ ಶಹಜಹಾನ್ ಮನೆಗೆ ಜನವರಿ 5ರಂದು ಇಡಿ ಅಧಿಕಾರಿಗಳು ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಶಹಜಹಾನ್‌ ಬೆಂಬಲಿಗರು ಹಾಗೂ ಕೆಲವು ಗ್ರಾಮಸ್ಥರು ಸೇರಿ ದಾಳಿ ನಡೆಸಿದ್ದರು. ಆಗ ಮೂವರು ಅಧಿಕಾರಿಗಳು ಗಾಯಗೊಂಡಿದ್ದರು. ಅಂದಿನಿಂದ ಇ,ಡಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಜ್ಯ ಪೊಲೀಸರು ಪರಾರಿಯಾಗಿರುವ ಶಹಜಹಾನ್‌ನನ್ನು ಹುಡುಕಾಡುತ್ತಿದ್ದು, ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.

ಶಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದರು. ಆತನ ಇಬ್ಬರು ಸಹಾಯಕರಾದ ಶಿಬಾ ಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಮರುದಿನ, ಪ್ರತಿಭಟನಾಕಾರರು ಹಜ್ರಾಗೆ ಸೇರಿದ ಆಸ್ತಿಗಳ ಮೇಲೆ ದಾಳಿ ಮಾಡಿ ಅವರ ಕೋಳಿ ಫಾರಂಗೆ ಬೆಂಕಿ ಹಚ್ಚಿದರು. ಟಿಎಂಸಿ ನಾಯಕ ಕಬಳಿಸಿರುವ ಜಮೀನಿನಲ್ಲಿ ಕೋಳಿ ಫಾರಂ ಸ್ಥಾಪಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಶಹಜಹಾನ್ ಮತ್ತು ಆತನ ಸಹಾಯಕರು ವರ್ಷಗಟ್ಟಲೆ ತಮ್ಮ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ ಶೋಷಣೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದಾರೆ. ಪೊಲೀಸರು ಸಂದೇಶ್‌ಖಾಲಿಯ ವಿವಿಧ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಲ್ಲದೆ, 16 ಪಂಚಾಯತ್‌ಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಪ. ಬಂಗಾಳದ ಸಂದೇಶ್‌ಖಾಲಿ ದೌರ್ಜನ್ಯ ಪ್ರಕರಣ ಆಘಾತಕಾರಿ

ಸಂದೇಶ್‌ಖಾಲಿಯಲ್ಲಿ ಕ್ರೋಧವಶರಾಗಿರುವ ಗ್ರಾಮಸ್ಥರನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ, ಆಡಳಿತ ಟಿಎಂಸಿ ಪಕ್ಷವು ಉತ್ತಮ್ ಸರ್ದಾರ್‌ನನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಆದರೆ ಹಜ್ರಾ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಪಕ್ಷ ಹೇಳಿದೆ. ಪ್ರತಿಪಕ್ಷಗಳ ಟೀಕೆಗೆ ಗುರಿಯಾದ ಸರ್ದಾರ್‌ನನ್ನು ಅಮಾನತುಗೊಳಿಸಿದ ಕೂಡಲೇ ಬಂಧಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version