ಚೆನ್ನೈ: ಅಕ್ರಮವಾಗಿ ಹಣ ವರ್ಗಾವಣೆ, ಉದ್ಯೋಗಕ್ಕಾಗಿ ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೀಡಾಗಿರುವ ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದ ರಾಜ್ಯಪಾಲ ಆರ್.ಎನ್. ರವಿ ಈಗ ಯುಟರ್ನ್ ತೆಗೆದುಕೊಂಡಿದ್ದಾರೆ. ಸಚಿವ ಸಂಪುಟದಿಂದ ವಜಾಗೊಳಿಸಿದ ತಮ್ಮ ಆದೇಶವನ್ನೇ ಆರ್.ಎನ್.ರವಿ ವಾಪಸ್ ಪಡೆದಿದ್ದಾರೆ.
ಗಂಭೀರ ಪ್ರಕರಣ ಎದುರಿಸುತ್ತಿರುವ ಸೆಂಥಿಲ್ ಬಾಲಾಜಿ ವಿರುದ್ಧ ಇ.ಡಿ ತನಿಖೆ ನಡೆಸುತ್ತಿರುವ ಕಾರಣ ತಿಳಿಸಿ ಅವರನ್ನು ರಾಜ್ಯಪಾಲರು ವಜಾಗೊಳಿಸಿದ್ದರು. ಇದರ ಕುರಿತು ತಮಿಳುನಾಡು ಸರ್ಕಾರ ಭಾರಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆದೇಶ ಹಿಂಪಡೆದಿದ್ದಾರೆ. ಹಾಗೆಯೇ, ಕಾನೂನು ಸಲಹೆ ಪಡೆದ ಬಳಿಕ ರಾಜ್ಯಪಾಲರು ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯಪಾಲರು ವಜಾಗೊಳಿಸುತ್ತಲೇ ಎಂ.ಕೆ.ಸ್ಟಾಲಿನ್ ಅವರು ಆಕ್ರೋಶ ಹೊರಹಾಕಿದ್ದರು. ರಾಜ್ಯಪಾಲರ ಆದೇಶದ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಇನ್ನು, ಸೆಂಥಿಲ್ ಬಾಲಾಜಿ ಅವರ ಬಂಧನದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಡಿಎಂಕೆ ಸೇರಿ ಹಲವು ಪ್ರತಿಪಕ್ಷಗಳು ಆಕ್ರೋಶ ಹೊರಹಾಕಿವೆ.
ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿದ ಬಳಿಕ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಇದಾದ ಬಳಿಕ ಅವರಿಗೆ ಸರ್ಜರಿಯನ್ನೂ ಮಾಡಲಾಗಿದೆ. ಸೆಂಥಿಲ್ ಬಾಲಾಜಿ ಅವರನ್ನು ಸದ್ಯ ನ್ಯಾಯಾಲಯವು ಇ.ಡಿ ವಶಕ್ಕೆ ನೀಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಮ್ಮನ್ನು ಕೆಣಕಬೇಡಿ ಎಂದ ತಮಿಳುನಾಡು ಸಿಎಂ ಸ್ಟಾಲಿನ್; ನಮ್ಮನ್ನು ಮುಟ್ಟಬೇಡಿ ಎಂದ ಬಿಜೆಪಿ ಚೀಫ್ ಅಣ್ಣಾಮಲೈ
ಏನಿದು ಪ್ರಕರಣ?
ಸೆಂಥಿಲ್ ಬಾಲಾಜಿಯವರು ಈ ಮೊದಲು ಎಐಎಡಿಎಂಕೆ ಪಕ್ಷದಲ್ಲಿ ಇದ್ದರು. ಈ ಪಕ್ಷ ಆಡಳಿತದಲ್ಲಿ ಇದ್ದ ಅವಧಿಯಾದ (ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ) 2011-2015ರವರೆಗೆ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಹೀಗೆ ಅವರು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಪೊಲೀಸರು ಮತ್ತು ಇ.ಡಿಗೆ ಅನುಮತಿ ಕೊಟ್ಟಿತ್ತು. ಅದರ ಬೆನ್ನಲ್ಲೇ ಇ.ಡಿ ತನಿಖೆ ಶುರು ಮಾಡಿದೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ