ಲಡಾಕ್: ವಾಸ್ತವ ಗಡಿ ನಿಯಂತ್ರಣ ರೇಖೆ (LAC) ಬಳಿ ಸೈನಿಕರನ್ನು ನಿಯೋಜಿಸಿ ಉಪಟಳ ಮಾಡುವ ಕುತಂತ್ರಿ ಚೀನಾ, ಗಡಿ ಬಳಿ ರಸ್ತೆ, ಗ್ರಾಮಗಳನ್ನು ನಿರ್ಮಿಸುವ ಮೂಲಕವೂ ಉದ್ಧಟತನ ಮಾಡುತ್ತದೆ. ಇದಕ್ಕೆ ಭಾರತ ತಿರುಗೇಟು ನೀಡುತ್ತಿದ್ದು, ಎಲ್‌ಎಸಿ ಬಳಿ 135 ಕಿ.ಮೀ ಹೆದ್ದಾರಿ (BRO Road At LAC) ನಿರ್ಮಿಸುವ ಕಾರ್ಯ ಆರಂಭಿಸಿದೆ. ಆ ಮೂಲಕ ವ್ಯೂಹಾತ್ಮಕವಾಗಿಯೂ ಚೀನಾಗೆ ಸೆಡ್ಡು ಹೊಡೆಯಲು ಮುಂದಾಗಿದೆ.
ಗಡಿ ರಸ್ತೆಗಳ ಸಂಸ್ಥೆಯು (BRO) ಲಡಾಕ್‌ನ ಡೆಮ್ಚೋಕ್ ಹಾಗೂ ಚುಶುಲ್ ಮಧ್ಯೆ 135 ಕಿ.ಮೀ ಹೆದ್ದಾರಿ ನಿರ್ಮಿಸುವ ಕಾರ್ಯ ಆರಂಭಿಸಿದೆ. 2016ರಲ್ಲಿಯೇ ಜಮ್ಮು-ಕಾಶ್ಮೀರ ಸರ್ಕಾರವು ರಸ್ತೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿತ್ತು. ಇದಾದ ಬಳಿಕ ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWI)ಯ ಅನುಮೋದನೆ ಸೇರಿ ಎಲ್ಲ ಪ್ರಕ್ರಿಯೆ ಬಳಿಕ ರಸ್ತೆ ಕಾಮಗಾರಿ ಆರಂಭಿಸಲಾಗಿದೆ.
ವ್ಯೂಹಾತ್ಮಕವಾಗಿ ಏಕೆ ಪ್ರಮುಖ?
ಪೂರ್ವ ಲಡಾಕ್ ಗಡಿ ಬಳಿ ಕಳೆದ ಎರಡೂವರೆ ವರ್ಷದಿಂದ ಚೀನಾ ಸೈನಿಕರನ್ನು ನಿಯೋಜಿಸಿದೆ. ಭಾರತವೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿ ತಿರುಗೇಟು ನೀಡಿದೆ. ಈಗ ಗಡಿ ಬಳಿ ಭಾರತವು ರಸ್ತೆ ನಿರ್ಮಿಸಿದರೆ ಗಡಿಗೆ ಶಸ್ತ್ರಾಸ್ತ್ರ ಸೇರಿ ಎಲ್ಲ ಉಪಕರಣಗಳು, ಮೂಲ ಸೌಲಭ್ಯಗಳನ್ನು ಸಾಗಿಸಲು ಅನುಕೂಲವಾಗಲಿದೆ. ಅದರಲ್ಲೂ, 2020ರಲ್ಲಿ ಸಂಘರ್ಷ ನಡೆದ ಪ್ಯಾಂಗೋಂಗ್ ಕೆರೆಯ ಬಳಿಯೇ ಚುಶುಲ್ ಇರುವುದರಿಂದ ಚೀನಾದ ಯಾವುದೇ ಆಕ್ರಮಣಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು, ಸೆಡ್ಡು ಹೊಡೆಯಲು ಹೆದ್ದಾರಿ ನೆರವಾಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://vistaranews.com/attribute-category/national/