ಫತೇಪುರ: ಉತ್ತರ ಪ್ರದೇಶದ ಫತೇಪುರ ಜಿಲ್ಲಾಧಿಕಾರಿ ಅನುಪ್ರಿಯಾ ದುಬೆ ಅವರ ಮನೆಯಲ್ಲೊಂದು ರೋಗಗ್ರಸ್ತ ಹಸುವಿದೆ. ಅದನ್ನು ನೋಡಿಕೊಳ್ಳಲು ದಿನಕ್ಕೊಬ್ಬರಂತೆ ವಾರಕ್ಕೆ ಏಳು ಮಂದಿ ಪಶುವೈದ್ಯರನ್ನು ನೇಮಿಸಲಾಗಿದೆ ಎಂದು ಆದೇಶ ನೀಡಿದ ಘಟನೆಯೊಂದು ಭಾರಿ ಸದ್ದು ಮಾಡಿತ್ತು. ಟ್ವಿಟರ್‌ನಲ್ಲಿ ಏಳು ಮಂದಿ ಪಶು ವೈದ್ಯರ ಹೆಸರಿನ ಪಟ್ಟಿಯನ್ನೂ ಹಾಕಲಾಗಿತ್ತು.
ಆದರೆ, ಜಿಲ್ಲಾಧಿಕಾರಿ ಅನುಪ್ರಿಯಾ ಅವರು ʻನನ್ನ ಮನೆಯಲ್ಲಿ ಯಾವುದೇ ಹಸುವಿಲ್ಲ. ನನ್ನ ಸಂಬಂಧಿಕರು ಯಾರೂ ಹಸು ಸಾಕುತ್ತಿಲ್ಲ. ಅಧಿಕಾರಿ ನನ್ನ ಹೆಸರಿಗೆ ಮಸಿ ಬಳಿಯಲು ಈ ರೀತಿ ಆದೇಶವನ್ನು ಬಿಡುಗಡೆ ಮಾಡಿದ್ದಾರೆ,ʼʼ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇದೀಗ ಇಂಥ ಆದೇಶವನ್ನು ಹೊರಡಿಸಿದ ಫತೇಪುರ ಜಿಲ್ಲಾ ಮುಖ್ಯ ಪಶುವೈದ್ಯಾಧಿಕಾರಿ ಎಸ್.ಕೆ. ತಿವಾರಿ ಅವರನ್ನು ಅಮಾನತು ಮಾಡಲಾಗಿದೆ.
ಮುಖ್ಯ ಪಶು ವೈದ್ಯಾಧಿಕಾರಿ ಎಸ್.ಕೆ. ತಿವಾರಿ ಅವರು ಬಿಡುಗಡೆ ಮಾಡಿದ ಆದೇಶದ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಭಾನುವಾರ ವೈರಲ್ ಆದ ಅಧಿಕೃತ ಪತ್ರದ ಪ್ರಕಾರ, ಫತೇಪುರದ ಮುಖ್ಯ ಪಶುವೈದ್ಯ ಅಧಿಕಾರಿ ಡಾ. ಎಸ್. ಕೆ. ತಿವಾರಿ ಅವರು ಅನಾರೋಗ್ಯ ಪೀಡಿತ ಹಸುವಿಗೆ ಚಿಕಿತ್ಸೆ ನೀಡುವಂತೆ ತಮ್ಮ ಅಧೀನದಲ್ಲಿರುವ ಏಳು ಪಶುವೈದ್ಯರಿಗೆ ನಿರ್ದೇಶನ ನೀಡಿದ್ದರು.
ಆ ಪತ್ರದಲ್ಲಿ ಹೀಗಿತ್ತು: “ಪಶುವೈದ್ಯರ ಕರ್ತವ್ಯ ಬೆಳಗ್ಗೆಯಿಂದ ಸಂಜೆಯವರೆಗೆ ಇರಬೇಕು. ಇದಲ್ಲದೆ, ಹಸುವಿನ ಸ್ಥಿತಿಯ ಬಗ್ಗೆ ಉಪ ಪಶುವೈದ್ಯಾಧಿಕಾರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮಾಹಿತಿ ನೀಡಬೇಕು. ಹಾಗೂ ವಾರದ ಏಳು ದಿನಗಳಲ್ಲಿ ಕರ್ತವ್ಯಕ್ಕೆ ಏಳು ಪಶುವೈದ್ಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಕಾರ್ಯದಲ್ಲಿ ಯಾವುದೇ ರೀತಿಯ ಆಲಸ್ಯವನ್ನು ʼಕ್ಷಮಿಸಲಾಗದುʼ ಎಂದು ಅದು ಎಚ್ಚರಿಸಿತ್ತು.
ಈ ಪತ್ರವು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅನುಪ್ರಿಯಾ ದುಬೆ ಅವರು ಇದನ್ನು ನಿರಾಕರಿಸಿದ ಬಳಿಕ ಪಶು ವೈದ್ಯಾಧಿಕಾರಿಗಳ ಮೇಲೆ ಸಿಟ್ಟು ತಿರುಗಿದೆ.
ಅಧಿಕಾರ ದುರ್ಬಳಕೆ
ಐಎಎಸ್ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಇತ್ತೀಚೆಗೆ ದಿಲ್ಲಿಯ ಐಎಎಸ್ ಅಧಿಕಾರಿ ದಂಪತಿ ದಿಲ್ಲಿಯ ಕ್ರೀಡಾಂಗಣವನ್ನು ಸಂಜೆ ಆರು ಗಂಟೆಗೇ ಖಾಲಿ ಮಾಡಿಸಿ ಬಳಿಕ ತಾವು ತಮ್ಮ ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಇದು ದೊಡ್ಡ ಪ್ರಮಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಬೇರೆ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರ ಅಮಾನತು