Site icon Vistara News

‘ಚುನಾವಣಾ ಬಾಂಡ್‌’ ರದ್ದು; ಸುದಾಮ-ಕೃಷ್ಣ ಉದಾಹರಣೆ ಮೂಲಕ ಸುಪ್ರೀಂಗೆ ಮೋದಿ ಟಾಂಗ್

Narendra Modi

Today If Sudama Gave Rice To Krishna SC Would Dub It Corruption: PM Narendra Modi's Dig At Top Court

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಕಲ್ಕಿ ಧಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮೋದಿ, ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್‌ ಅಧ್ಯಕ್ಷ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರನ್ನು ಹೊಗಳಿದರು. ಇದೇ ವೇಳೆ, ಅವರು ಭಗವಾನ್‌ ಶ್ರೀಕೃಷ್ಣ (Krishna) ಹಾಗೂ ಸುದಾಮ (Sudama) ಅವರ ಉದಾಹರಣೆ ನೀಡುವ ಮೂಲಕ ಚುನಾವಣಾ ಬಾಂಡ್‌ ಯೋಜನೆ (Election Bond Scheme) ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ಗೆ (Supreme Court) ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ.

““ಎಲ್ಲರಿಗೂ ಕೊಡಲು ಶಕ್ತಿ ಇರುತ್ತದೆ. ಅವರ ಬಳಿ ಏನಾದರೂ ಕೊಡಲು ಇರುತ್ತದೆ. ಆದರೆ, ನನ್ನ ಬಳಿ ಭಾವನೆಗಳ ಹೊರತಾಗಿ ಏನೂ ಇಲ್ಲ ಎಂಬುದಾಗಿ ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಹೇಳಿದರು. ಪ್ರಮೋದ್‌ ಅವರೇ, ನೀವು ನನಗೆ ಏನನ್ನೂ ಕೊಡಬೇಕಿಲ್ಲ. ಕೊಡದಿರುವುದೇ ತುಂಬ ಒಳ್ಳೆಯದು. ಏಕೆಂದರೆ ಈಗ ಸಮಯ ಬದಲಾಗಿದೆ. ನೀವು ಏನನ್ನಾದರೂ ಕೊಟ್ಟರೆ, ಅದನ್ನು ಭ್ರಷ್ಟಾಚಾರ ಎಂದು ಬಿಡುತ್ತಾರೆ. ನೀವು ನನ್ನ ಬಗ್ಗೆ ಒಳ್ಳೆಯ ಭಾವನೆಗಳನ್ನು ಇಟ್ಟುಕೊಂಡಿರುವುದೇ ಸಾಕು” ಎಂಬುದನ್ನು ಸುದಾಮ ಉದಾಹರಣೆ ಮೂಲಕ ಮೋದಿ ಹೇಳಿದರು.

ಮೋದಿ ಕೊಟ್ಟ ಉದಾಹರಣೆ ಏನು?

“ಪ್ರಮೋದ್‌ ಅವರೇ ನೀವು ನನಗೆ ಏನೂ ಕೊಡುವುದು ಬೇಡ. ಈಗ ಕಾಲ ಬದಲಾಗಿದೆ. ಈಗೇನಾದರೂ ಸುದಾಮ ಇದ್ದು, ಶ್ರೀಕೃಷ್ಣನಿಗೆ ಅಕ್ಕಿ (ಅವಲಕ್ಕಿ) ಕೊಟ್ಟರೆ, ಆ ವಿಡಿಯೊ ಹೊರಬಂದು, ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಲಾಗುತ್ತಿತ್ತು. ಆಗ ಕೋರ್ಟ್‌ ಕೂಡ ಭಗವಾನ್‌ ಕೃಷ್ಣನು ಭ್ರಷ್ಟಾಚಾರಿ ಎಂಬುದಾಗಿ ತೀರ್ಪು ನೀಡುತ್ತಿತ್ತು. ಹಾಗಾಗಿ, ನೀವು ನನಗೆ ಏನನ್ನೂ ಕೊಡುವುದು ಬೇಡ. ನಿಮ್ಮ ಒಳ್ಳೆಯ ಅಭಿಪ್ರಾಯವೊಂದೇ ಸಾಕು” ಎಂದರು.

ಇದನ್ನೂ ಓದಿ: Narendra Modi: ಕಾಂಗ್ರೆಸ್‌ ಉಚ್ಚಾಟಿಸಿದ ಧಾರ್ಮಿಕ ಗುರುವನ್ನು ಹೊಗಳಿದ ಮೋದಿ!

“ಆಚಾರ್ಯ ಪ್ರಮೋದ್‌ ಕೃಷ್ಣಂ ಅವರು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕಾಗಿ ಹೋರಾಡಿದರು. ಇದಕ್ಕೂ ಮೊದಲಿನ ಸರ್ಕಾರಗಳು ಕಲ್ಕಿ ಧಾಮ ದೇವಾಲಯ ನಿರ್ಮಾಣಕ್ಕೆ ಅವಕಾಶ ಕೊಡಲಿಲ್ಲ. ಕಾನೂನು ಹೋರಾಟವನ್ನೂ ಪ್ರಮೋದ್‌ ಕೃಷ್ಣಂ ಅವರು ಮಾಡಬೇಕಾಯಿತು. ಕಲ್ಕಿ ಮಂದಿರ ನಿರ್ಮಾಣವಾದರೆ ಕಾನೂನು ಸುವ್ಯಸ್ಥೆಗೆ ಧಕ್ಕೆಯುಂಟಾಗುತ್ತದೆ ಎಂದರು. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಕಲ್ಕಿ ಮಂದಿರ ನಿರ್ಮಾಣಕ್ಕೆ ಶಂಕುಸ್ತಾಪನೆ ನೆರವೇರಿಸಲಾಗುತ್ತದೆ” ಎಂದು ಪ್ರತಿಪಕ್ಷಗಳಿಗೆ ಮೋದಿ ಪರೋಕ್ಷವಾಗಿ ಟಾಂಗ್‌ ಕೊಟ್ಟರು.

ಅನಾಮಧ್ಯೇಯವಾಗಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡುವ ಯೋಜನೆಯನ್ನು ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ಅಸಾಂವಿಧಾನಿಕ ಎಂದು ತೀರ್ಪು ನೀಡಿದೆ. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version