Site icon Vistara News

ಡ್ರಗ್ಸ್‌ ಸೇವನೆ-ಸಾಗಣೆ ವಿರೋಧಿ ದಿನ; ರಾಜ್ಯದಲ್ಲಿ ಕಳೆದ ವರ್ಷ ಜಪ್ತಿಯಾದ ಮಾದಕ ದ್ರವ್ಯದ ಪ್ರಮಾಣ ಎಷ್ಟು?

Drugs

ನವದೆಹಲಿ: ಇಂದು (ಜೂ.26) ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ಅಂತಾರಾಷ್ಟ್ರೀಯ ದಿನಾಚರಣೆ (International Day Against Drug Abuse and Illicit Trafficking 2022). ಈಗಂತೂ ಈ ಡ್ರಗ್ಸ್‌ ಸೇವನೆ, ಸಾಗಣೆಯೆಂಬುದು ಅತ್ಯಂತ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಅಲ್ಲಿ ಡ್ರಗ್ಸ್‌ ಪಾರ್ಟಿ ಮೇಲೆ ದಾಳಿಯಾಯಿತು, ಇಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು ಎಂಬಂಥ ವರದಿಗಳನ್ನು ನಾವು ಪ್ರತಿದಿನ ಓದುತ್ತಿದ್ದೇವೆ. ಮಾದಕ ದ್ರವ್ಯ ಸೇವನೆ-ಕಳ್ಳಸಾಗಣೆಯೂ ಒಂದು ಪಿಡುಗಂತೆ, ಜಗತ್ತನ್ನು, ದೇಶವನ್ನು ಬಾಧಿಸುತ್ತಿದೆ. ನಿಯಂತ್ರಣಕ್ಕಾಗಿ ಹಲವು ಕಟ್ಟುನಿಟ್ಟಿನ ಕಾನೂನು, ಕ್ರಮ ಜಾರಿಯಲ್ಲಿದ್ದರೂ ಕಡಿವಾಣ ಕಷ್ಟವಾಗುತ್ತಿದೆ. ಮಾದಕ ವಸ್ತುಗಳ ಸೇವನೆ-ಕಳ್ಳಸಾಗಣೆಗಳು ಕಾನೂನು ಬಾಹಿರ, ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಜನರಿಗೆ ಅರ್ಥ ಮಾಡಿಸುವ ಸಲುವಾಗಿಯೇ ಪ್ರತಿವರ್ಷ ಜೂ.26ರಂದು ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ.

1987ರ ಡಿಸೆಂಬರ್‌ 7ರಂದು ನಡೆದ ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ತೆಗೆದುಕೊಂಡ 42/112 ನಿರ್ಣಯದ ಅನ್ವಯ, ಪ್ರತಿವರ್ಷವೂ ಜೂ.26ರಂದು ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಜಾಗತಿಕ ಪಿಡುಗಾಗಿರುವ ಡ್ರಗ್ಸ್‌ ಸೇವನೆ-ಸಾಗಣೆಯನ್ನು ತಡೆಯಲು ದೇಶಗಳೆಲ್ಲ ಒಟ್ಟಾಗಬೇಕು. ಅಂತಾರಾಷ್ಟ್ರೀಯ ಸಮಾಜವನ್ನು ಡ್ರಗ್ಸ್‌ ಮುಕ್ತ ಮಾಡಬೇಕು ಎಂಬ ಮಹದುದ್ದೇಶದಿಂದ ಈ ದಿನ ಆಚರಣೆಗೆ ಬಂದಿದೆ.

ಥೀಮ್‌ ಏನು?
ಪ್ರತಿವರ್ಷವೂ ಒಂದೊಂದು ಥೀಮ್‌ನೊಂದಿಗೆ ಈ ದಿನ ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ʼಆರೋಗ್ಯ ಕ್ಷೇತ್ರ ಮತ್ತು ಮಾನವೀಯ ಬಿಕ್ಕಟ್ಟು ನಿವಾರಣೆಗೆ ಸವಾಲಾಗಿರುವ ಮಾದಕ ದ್ರವ್ಯವನ್ನು ತಡೆಯುವುದನ್ನೇ ಥೀಮ್‌ ಆಗಿ ಇಡಲಾಗಿದೆ. ಅದರ ಅನ್ವಯ ಈ ಡ್ರಗ್ಸ್‌ ಎಂಬುದು ಮನುಷ್ಯರ ಆರೋಗ್ಯಕ್ಕೆ ಎಷ್ಟು ಹಾನಿಕರ, ಜನರ ಜೀವನ, ಯೋಗಕ್ಷೇಮಕ್ಕೆ ಇದೆಷ್ಟು ಧಕ್ಕೆ ತರುತ್ತದೆ ಎಂಬ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಯುನೈಟೆಡ್‌ ನೇಶನ್ಸ್‌ನ ಡ್ರಗ್ಸ್‌ & ಕ್ರೈಮ್‌ ವಿಭಾಗವು ಹಲವು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಿದೆ. ಮಾದಕ ವ್ಯಸನಿಗಳಿಗೆ ಕೌನ್ಸಿಲಿಂಗ್‌, ಡ್ರಗ್ಸ್‌ ಸೇವಿಸಿ ಆರೋಗ್ಯ ಹಾಳು ಮಾಡಿಕೊಂಡವರಿಗೆ ಚಿಕಿತ್ಸೆ ನೀಡುವ ವಿಧಾನ ಇತ್ಯಾದಿಗಳನ್ನು ಈ ಥೀಮ್‌ ಒಳಗೊಂಡಿದೆ.

ವರ್ಷದಲ್ಲಿ ೨೧ ಟನ್‌ಗಳಷ್ಟು ಮಾದಕ ದ್ರವ್ಯ ವಶ
ಪ್ರಸ್ತುತ ಮಾದಕ ದ್ರವ್ಯ ನಿಯಂತ್ರಣ ಪರಿಣಾಮಕಾರಿಯಾಗಿ ಆಗಿಲ್ಲ. ಕಳೆದ ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಇಲ್ಲಿನ ಪೊಲೀಸರು ಬರೋಬ್ಬರಿ ೨೫. ೬ ಕೋಟಿ ರೂ.ಬೆಲೆಯ ೨೧ ಟನ್‌ಗಳಷ್ಟು ಮಾದಕ ದ್ರವ್ಯಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳಲ್ಲಿ ಹೆರಾಯಿನ್‌, ಗಾಂಜಾ, ಅಫೀಮು, ಕೊಕೈನ್‌, ಸಿಂಥೆಟಿಕ್‌ ಡ್ರಗ್ಸ್‌ಗಳು ಸೇರಿವೆ. ಒಟ್ಟಾರೆ ರಾಜ್ಯದಲ್ಲಿ ವಶಪಡಿಸಿಕೊಂಡ ಡ್ರಗ್ಸ್‌ನ ಪ್ರಮಾಣದಲ್ಲಿ ಶೇ. ೫೦ರಷ್ಟು ಜಪ್ತಿಯಾಗಿದ್ದು ಬೆಂಗಳೂರಿನಲ್ಲಿಯೇ ಆಗಿದೆ. ೧೨ ತಿಂಗಳಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ 8505 ಪ್ರಕರಣಗಳು ದಾಖಲಾಗಿದ್ದು, ೫೩೬೩ ಕೇಸ್‌ಗಳು ಇತ್ಯರ್ಥಗೊಂಡಿವೆ. ೭೮೪೬ ಆರೋಪಿಗಳನ್ನು ಬಂಧಿಸಲಾಗಿದೆ. ಅವರಲ್ಲೂ ೧೮೫ ಮಂದಿ ವಿದೇಶಿಯರೇ ಆಗಿದ್ದಾರೆ ಎಂದು ರಾಜ್ಯ ಪೊಲೀಸ್‌ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಚಾಲಕರೇ ಇಲ್ಲದೆ ಚಲಿಸುತ್ತದೆ ಬೆಂಗಳೂರು ಮೆಟ್ರೊ!

Exit mobile version