Site icon Vistara News

President Election| 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ, ಮುರ್ಮು ಗೆಲುವಿನ ಅಂತರದ ಕುತೂಹಲ

president electi0n

ನವ ದೆಹಲಿ: ಭಾರತ ತನ್ನ ೧೫ನೇ ರಾಷ್ಟ್ರಪತಿಯ ಆಯ್ಕೆಗೆ ( President Election) ಇಂದು ಚುನಾವಣೆ ನಡೆಸುವ ಸಂಭ್ರಮದಲ್ಲಿದೆ. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶ್ವಂತ್‌ ಸಿನ್ಹಾ ಕಣದಲ್ಲಿದ್ದಾರೆ. ದ್ರೌಪದಿ ಮುರ್ಮು ಅವರೇ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಸ್ಪಷ್ಟ ಲಕ್ಷಣಗಳಿದ್ದು, ಗೆಲುವಿನ ಅಂತರ ಕುತೂಹಲ ಮೂಡಿಸಿದೆ. ಇಂದು ಬೆಳಗ್ಗೆ ೧೦ ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ ೫ ಗಂಟೆಯ ತನಕ ನಡೆಯಲಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಾರ್ಖಂಡ್‌ನ ಮಾಜಿ ರಾಜ್ಯಪಾಲರಾದ ದ್ರೌಪದಿ ಮುರ್ಮು ಅವರಿಗೆ 44 ಪಕ್ಷಗಳು ಬೆಂಬಲ ಸೂಚಿಸಿವೆ. ಯಶ್ವಂತ್‌ ಸಿನ್ಹಾ ಅವರಿಗೆ ೩೪ ಪಕ್ಷಗಳು ಬೆಂಬಲಿಸಿವೆ. ಮತ ಎಣಿಕೆಗೆ ಜುಲೈ ೨೧ರ ದಿನಾಂಕ ನಿಗದಿಯಾಗಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ಅವಧಿ ಜುಲೈ ೨೪ಕ್ಕೆ ಮುಕ್ತಾಯವಾಗುತ್ತಿದೆ.

ದ್ರೌಪದಿ ಮುರ್ಮು ಅವರು ಜನಿಸಿದ್ದು 1958ರ ಜೂನ್‌ ೨೦ರಂದು. 2015-20ರ ಅವಧಿಯಲ್ಲಿ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ನಗರಸಭಾ ಅಧ್ಯಕ್ಷತೆಯಿಂದ ಆರಂಭಿಸಿ ಭಾರತೀಯ ಜನತಾ ಪಕ್ಷದ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ದ್ರೌಪದಿ ಮುರ್ಮು ಆಯ್ಕೆ ಸಂಭವ

ವ್ಯಾಪಕ ಬೆಂಬಲದ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಅವರು ನೂತನ ರಾಷ್ಟ್ರಪತಿಯಾಗುವ ನಿರೀಕ್ಷೆಗಳಿವೆ. ಮುರ್ಮು ಅವರ ಗೆಲುವು ಹಲವು ಹೊಸ ದಾಖಲೆಗಳನ್ನೂ ಬರೆಯಲಿದೆ. ೬೪ ವರ್ಷ ವಯಸ್ಸಿನ ಅವರು ಗೆದ್ದರೆ, ಸ್ವತಂತ್ರ ಭಾರತದಲ್ಲಿ ಹುಟ್ಟಿದ ಮೊದಲ ವ್ಯಕ್ತಿ ರಾಷ್ಟ್ರಪತಿ ಆದಂತಾಗುತ್ತದೆ. ರಾಷ್ಟ್ರಪತಿ ಹುದ್ದೆಗೆ ಏರಿದ ಮೊದಲ ಬುಡಕಟ್ಟು ನಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ. ಕಿರಿಯ ವಯಸ್ಸಿಗೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರೂ ಎನ್ನಿಸಲಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ತಮ್ಮ ಸ್ಪರ್ಧೆಯಿಂದ ೧೦ ಕೋಟಿಗೂ ಅಧಿಕ ಬುಡಕಟ್ಟು ಸಮುದಾಯದ ಜನತೆಗೆ ಸಂತಸವಾಗಿದೆ ಎಂದು ದ್ರೌಪದಿ ಮುರ್ಮು ಅವರು ಹೇಳಿದ್ದಾರೆ. ಬಿಜೆಪಿ ಜತೆಗೆ ಬಿಜೆಡಿ, ವೈಎಸ್‌ಆರ್‌ಸಿಪಿ, ಬಿಎಸ್ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್‌, ಶಿರೋಮಣಿ ಅಕಾಲಿದಳ, ಶಿವಸೇನಾ, ಜೆಎಂಎಂ ಪಕ್ಷಗಳು ದ್ರೌಪದಿ ಮುರ್ಮು ಅವರಿಗೆ ಬೆಂಬಲಿಸಿವೆ.

೪,೮೦೦ ಸಂಸದರು, ಶಾಸಕರಿಂದ ಮತದಾನ

ರಾಷ್ಟ್ರಪತಿಯವರ ಚುನಾವಣೆಯಲ್ಲಿ ೪,೮೦೦ಕ್ಕೂ ಹೆಚ್ಚು ಸಂಸದರು, ಶಾಸಕರು ಮತ ಚಲಾಯಿಸಲಿದ್ದಾರೆ. ಸಂಸತ್‌ ಭವನ ಮತ್ತು ರಾಜ್ಯಗಳ ಅಸೆಂಬ್ಲಿಗಳಲ್ಲಿ ಬೆಳಗ್ಗೆ ೧೦ರಿಂದ ಸಂಜೆ ೫ರ ತನಕ ಮತದಾನ ನಡೆಯಲಿದೆ.

ಮತದಾನ ಪ್ರಕ್ರಿಯೆ ಗೌಪ್ಯವಾಗಿರಲಿದ್ದು, ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರಿಗೆ ವಿಪ್‌ ಜಾರಿಗೊಳಿಸುವಂತಿಲ್ಲ. ವಿಪ್‌ ಜಾರಿಗೆ ಅನುಮತಿ ಇದ್ದಾಗ ಪಕ್ಷದ ಆದೇಶ ಪ್ರಕಾರ ಮತ ಚಲಾಯಿಸಬೇಕಾಗುತ್ತದೆ. ಆದರೆ ಇಲ್ಲಿ ಮತದಾರರಿಗೆ ಯಾರಿಗೆ ಬೇಕಾದರೂ ಓಟು ಕೊಡುವ ಸ್ವಾತಂತ್ರ್ಯ ಇದೆ.

ದ್ರೌಪದಿ ಮುರ್ಮು ಅವರಿಗೆ ೬.೬೭ ಲಕ್ಷಕ್ಕೂ ಅಧಿಕ ಮತ ನಿರೀಕ್ಷೆ

ಒಟ್ಟು ೧೦,೮೬,೪೩೧ ಮತಗಳು ಲಭ್ಯವಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ನಾನಾ ಪಕ್ಷಗಳಿಂದ ಈಗಾಗಲೇ ೬.೬೭ ಲಕ್ಷ ಮತಗಳ ಬೆಂಬಲ ಲಭಿಸಿದೆ. ಅವರು ಮೂರನೇ ಎರಡರಷ್ಟು ಮತಗಳನ್ನು ನಿರಾಯಾಸವಾಗಿ ಗಳಿಸುವ ಸಾಧ್ಯತೆ ಇದೆ. ೨೦೧೭ರಲ್ಲಿ ರಾಮ್‌ ನಾಥ್‌ ಕೋವಿಂದ್‌ ಅವರು ೭ ಲಕ್ಷಕ್ಕಿಂತ ಹೆಚ್ಚು ಮತ ಗಳಿಸಿದ್ದರು. ಮುರ್ಮು ಅವರು ಕೂಡ ಅದೇ ರೀತಿ ಮತ ಗಳಿಸುವ ನಿರೀಕ್ಷೆ ಇದೆ.

ಚುನಾವಣಾ ಆಯೋಗ ಮತದಾನದ ಗೌಪ್ಯತೆ ಕಾಪಾಡಲು, ವಿಶೇಷವಾಗಿ ವಿನ್ಯಾಸಗೊಳಿಸಿದ ಪೆನ್‌, ಶಾಯಿ, ಮತಪತ್ರಗಳನ್ನು ಬಿಡುಗಡೆಗೊಳಿಸಿದೆ.

ಹಸಿರು, ಗುಲಾಬಿ ಮತಪತ್ರ

ಸಂಸದರು ಹಸಿರು ಬಣ್ಣದ ಮತ ಪತ್ರ ಹಾಗೂ ಶಾಸಕರು ಗುಲಾಬಿ ಬಣ್ಣದ ಪತಪತ್ರವನ್ನು ಬಳಸಲಿದ್ದಾರೆ. ಶಾಸಕರು ಮತ್ತು ಸಂಸದರ ಮತಗಳನ್ನು ಎಣಿಸಲು ಇದರಿಂದ ಸುಲಭವಾಗುತ್ತದೆ.

ರಾಜ್ಯದಿಂದ ರಾಜ್ಯಕ್ಕೆ ಸಂಸದರ ಮತಗಳ ಮೌಲ್ಯ ಭಿನ್ನವಾಗಿದೆ. ಉತ್ತರಪ್ರದೇಶದಲ್ಲಿ ಪ್ರತಿ ಶಾಸಕರ ಮತದ ಮೌಲ್ಯ ೨೦೮ ಆಗಿದ್ದರೆ, ಜಾರ್ಖಂಡ್‌ ಮತ್ತು ತಮಿಳುನಾಡಿನಲ್ಲಿ ೧೭೬ ಆಗಿದೆ.

ಕರ್ನಾಟಕದ ೨೨೪ ಶಾಸಕರು ವಿಧಾನಸೌಧದಲ್ಲಿ ಮತದಾನ ಮಾಡಲಿದ್ದಾರೆ. ಸಂಸದರು ಸಂಸತ್ತಿನಲ್ಲಿ ಮತ ಚಲಾಯಿಸಲಿದ್ದಾರೆ.

ರಾಷ್ಟ್ರಪತಿ ಚುನಾವಣೆಯ ವೇಳಾ ಪಟ್ಟಿ

ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಉಪ ರಾಷ್ಟ್ರಪತಿ ಎಲೆಕ್ಷನ್‌, ಆ. 6ಕ್ಕೆ ಮತದಾನ, ಜು.5ರಂದು ಅಧಿಸೂಚನೆ

ಇದನ್ನೂ ಓದಿ: ವಿಸ್ತಾರ Explainer: ರಾಷ್ಟ್ರಪತಿ ಚುನಾವಣೆ 2022- ಯಾರ ಮತಕ್ಕೆ ಎಷ್ಟು ಬೆಲೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಇದನ್ನೂ ಓದಿ:

Exit mobile version