Site icon Vistara News

Maharastra floor test | ಇಂದು ಶಿಂಧೆ ವಿಶ್ವಾಸಮತ ಯಾಚನೆ, ಹಾದಿ ಸುಗಮ

shindhe-devendra

ಮುಂಬಯಿ: ಮಹಾರಾಷ್ಟ್ರದಲ್ಲಿ ಇಂದು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ನೂತನ ಸರ್ಕಾರ ವಿಶ್ವಾಸ ಮತ ಪರೀಕ್ಷೆಯನ್ನು ಎದುರಿಸಲಿದೆ. ಬಿಜೆಪಿ-ಶಿಂಧೆ ಬಣ ವಿಶ್ವಾಸ ಮತವನ್ನು ಗೆಲ್ಲುವ ಉತ್ಸಾಹದಲ್ಲಿದೆ.

ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಬಿಜೆಪಿ ಸಾಸಕ ರಾಹುಲ್‌ ನಾರ್ವೇಕರ್‌ ಆಯ್ಕೆಯಾಗಿರುವುದರಿಂದ ವಿಶ್ವಾಸ ಮತ ಪರೀಕ್ಷೆಯ ಕಲಾಪಗಳು ಯಾವುದೇ ಅಡಚಣೆ ಇಲ್ಲದೆ ನೆರವೇರುವ ನಿರೀಕ್ಷೆ ಇದೆ. ೨೮೮ ಸದಸ್ಯತ್ವ ಬಲದ ಸದನದಲ್ಲಿ ೧೬೪ ಮತಗಳನ್ನು ಗಳಿಸಿ ನಾರ್ವೇಕರ್‌ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿ ಕೊಲಾಬಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾರ್ವೇಕರ್‌ ಈಗ ಸ್ಪೀಕರ್‌ ಆಗಿದ್ದಾರೆ. ಕಳೆದ ವರ್ಷ ಫೆಬ್ರವರಿಯಿಂದ ಸ್ಪೀಕರ್‌ ಹುದ್ದೆ ಖಾಲಿಯಾಗಿತ್ತು.

ಏಕನಾಥ್‌ ಶಿಂಧೆ ಅವರ ಬಣದಲ್ಲಿ ೫೦ ಶಾಸಕರಿದ್ದಾರೆ. ಇದರಲ್ಲಿ ೩೯ ಮಂದಿ ಶಿವಸೇನಾದಿಂದ ರೆಬೆಲ್‌ ಆಗಿ ಬಂದವರು. ಬಿಜೆಪಿ ೧೦೬ ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿದೆ.

ಶಿಂಧೆಗೆ ಗೆಲ್ಲುವ ವಿಶ್ವಾಸ

” ನಾವು ಸುಲಭವಾಗಿ ವಿಶ್ವಾಸಮತ ಗೆಲ್ಲಲಿದ್ದೇವೆ. ನಮಗೆ ಸಾಕಷ್ಟು ಬೆಂಬಲ ಇದೆ. ಯಾವುದೇ ಚಿಂತೆ ಅನಗತ್ಯ, ಶಿವಸೇನಾದ ಶಾಸಕಾಂಗ ಪಕ್ಷವೂ ನಮ್ಮದೇ ಆಗಿದೆ. ನಾವು ಬಾಳಾ ಸಾಹೇಬ್‌ ಅವರ ನಿಜವಾದ ಶಿವ ಸೈನಿಕರು. ಅವರ ಹಿಂದುತ್ವ ರಕ್ಷಣೆಯ ಚಿಂತನೆಯನ್ನು ನಾವು ಮುಂದುವರಿಸಲಿದ್ದೇವೆʼʼ ಎಂದು ಸಿಎಂ ಏಕನಾಥ್‌ ಶಿಂಧೆ ಹೇಳಿದ್ದಾರೆ.

ಸ್ಪೀಕರ್‌ ಆಗಿ ಭಾನುವಾರ ಚುನಾಯಿತರಾದ ಕೆಲ ಹೊತ್ತಿನಲ್ಲೇ ರಾಹುಲ್‌ ನಾರ್ವೇಕರ್‌ ಅವರು ಶಿವಸೇನಾ ಶಾಸಕಾಂಗ ಪಕ್ಷ ನಾಯಕ ಅಜಯ್‌ ಚೌಧುರಿ ಅವರನ್ನು ವಜಾಗೊಳಿಸಿದರು. ಏಕನಾಥ ಶಿಂಧೆ ಅವರು ಮತ್ತೆ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಶಿಂಧೆ ಬಣದ ಭರತ್‌ ಗೋಗ್ವಾಳೆ ಶಿವಸೇನಾದ ಮುಖ್ಯ ವಿಪ್‌ ಆಗಿದ್ದಾರೆ. ಉದ್ಧವ್‌ ಬಣದ ಮುಖ್ಯ ವಿಪ್‌ ಆಗಿದ್ದ ಸುನಿಲ್‌ ಪ್ರಭು ಅವರನ್ನು ವಜಾಗೊಳಿಸಲಾಗಿದೆ. ಹೀಗಾಗಿ ಶಿಂಧೆ ಬಣ ಶಿವಸೇನಾದ ವಿಪ್‌ ಜಾರಿಗೊಳಿಸುವ ಅಧಿಕಾರ ಗಳಿಸಿದೆ. ಇದರೊಂದಿಗೆ ಉದ್ಧವ್‌ ಬಣಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.

Exit mobile version