ಚಂಡೀಗಢ: ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಝಳದಿಂದಾಗಿ ಜನ ಐಸ್‌ಕ್ರೀಂ, ಎಳನೀರು, ತಂಪು ಪಾನೀಯ ಸೇವಿಸುತ್ತಿದ್ದಾರೆ. ಐಸ್‌ಕ್ರೀಂ, ತಂಪು ಪಾನೀಯಗಳ (Cold Drinks) ಸೇವನೆ ಕೂಡ ಕೆಲವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರ ಬೆನ್ನಲ್ಲೇ, ಪಂಜಾಬ್‌ನ ಪಟಿಯಾಲದಲ್ಲಿ (Patiala) ಒಂದೂವರೆ ವರ್ಷದ ಬಾಲಕಿಯು ಅಂಗಡಿಯಲ್ಲಿ ಖರೀದಿಸಿದ ಚಾಕೊಲೇಟ್ (Chocolate) ತಿಂದು ರಕ್ತದ ವಾಂತಿ ಮಾಡಿಕೊಂಡಿದ್ದಾಳೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.
ಲುಧಿಯಾನದವಳಾದ ಬಾಲಕಿಯು ತಂದೆ-ತಾಯಿ ಜತೆ ಪಟಿಯಾಲದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ವಿಕ್ಕಿ ಗೆಹ್ಲೋಟ್ ಎಂಬುವರು ಬಾಲಕಿಯ ಸಂಬಂಧಿಯಾಗಿದ್ದು, ಅಂಗಡಿಯೊಂದರಲ್ಲಿ ಒಂದು ಬಾಕ್ಸ್ ಚಾಕೊಲೇಟ್ ಖರೀದಿಸಿದ್ದಾರೆ. ಇವರು ಖರೀದಿಸಿದ ಬಾಕ್ಸ್‌ನಲ್ಲಿದ್ದ ಚಾಕೊಲೇಟ್‌ಗಳನ್ನು ಬಾಲಕಿಯು ತಿಂದಿದ್ದಾಳೆ. ಇದಾದ ಕೆಲ ಹೊತ್ತಿನಲ್ಲೇ ಆಕೆ ರಕ್ತದ ವಾಂತಿ ಮಾಡಿದ್ದಾಳೆ. ಗಾಬರಿಗೊಂಡ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಚಾಕೊಲೇಟ್ ತಿಂದು, ರಕ್ತದ ವಾಂತಿ ಮಾಡಿದ ಬಾಲಕಿಯನ್ನು ವೈದ್ಯರು ಪರಿಶೀಲಿಸಿದಾಗ, ಆಕೆಯು ವಿಷಪೂರಿತ ಅಂಶಗಳಿರುವ ಚಾಕೊಲೇಟ್ ತಿಂದ ಬಳಿಕವೇ ಹೀಗಾಗಿದೆ ಎಂಬುದನ್ನು ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಚಾಕೊಲೇಟ್ ಬಾಕ್ಸ್‌ಅನ್ನು ಪರಿಶೀಲಿಸಿದಾಗ, ಚಾಕೊಲೇಟ್ ಎಕ್ಸ್‌ಪೈರ್ ಆಗಿತ್ತು ಎಂಬುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಐಸ್‌ಕ್ರೀಂ ತಿಂದು ಅವಳಿ ಮಕ್ಕಳ ಸಾವು
ಕೆಲ ದಿನಗಳ ಹಿಂದಷ್ಟೇ ಕರ್ನಾಟಕದಲ್ಲಿ ಐಸ್‌ಕ್ರೀಂ ತಿಂದು ಇಬ್ಬರು ಅವಳಿ ಮಕ್ಕಳು ಮೃತಪಟ್ಟಿದ್ದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಘಟನೆ ನಡೆದಿತ್ತು. ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ತಾಯಿ ಮತ್ತು ಮಕ್ಕಳು ಐಸ್‌ಕ್ರೀಂ ಖರೀದಿಸಿ ತಿಂದಿದ್ದರು. ಇದರಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಮಕ್ಕಳು ಮನೆಯಲ್ಲಿ ಮೃತಪಟ್ಟಿದ್ದರು. ತಾಯಿ ಕೂಡ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಬಳಿಕ ತಾಯಿಯು ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದು ಘಟನೆಯಲ್ಲಿ ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ ತಿಂದು ಅಸ್ವಸ್ಥನಾಗಿದ್ದ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಚೇತರಿಸಿಕೊಂಡಿದ್ದಾನೆ. ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್‌ನಲ್ಲಿ ಘಟನೆ ನಡೆದಿತ್ತು. ಮಕ್ಕಳ ಮನರಂಜನೆಗಾಗಿ ನಡೆಯುತ್ತಿರುವ ಎಕ್ಸಿಬಿಷನ್‌ನ ಸ್ಟಾಲ್ ಒಂದರಲ್ಲಿ ಸ್ಮೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಅದನ್ನು ಏಕಾಏಕಿ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದ.
ಇದನ್ನೂ ಓದಿ: Amul Chocolates: ಶೀಘ್ರವೇ ದುಬಾರಿಯಾಗಲಿದೆ ಅಮೂಲ್ ಚಾಕೊಲೇಟ್, ಐಸ್‌ಕ್ರೀಮ್!