Site icon Vistara News

Toll Fee Hike: ವಾಹನ ಸವಾರರಿಗೆ ಮತ್ತೆ ಸುಂಕದ ಬರೆ; ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ ಹೆಚ್ಚಳ

Toll Fee Hike

ನವದೆಹಲಿ: ಲೋಕಸಭಾ ಚುನಾವಣೆ(Lok Sabha Election 2024) ಮುಗಿಯುತ್ತಿದ್ದಂತೆ ವಾಹನ ಸವಾರರಿಗೆ ಶಾಕ್‌ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂದಿನಿಂದ ದೇಶ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ(Toll Fee Hike)ವನ್ನು 3-5% ರಷ್ಟು ಹೆಚ್ಚಿಸಲಾಗುತ್ತಿದೆ, ಲೋಕಸಭಾ ಚುನಾವಣೆ ಕಾರಣದಿಂದಾಗಿ ಏಪ್ರಿಲ್‌ನಲ್ಲಿ ವಾರ್ಷಿಕ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಇದೀಗ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಹೆದ್ದಾರಿ ಟೋಲ್‌ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ದೇಶದಲ್ಲಿ ಟೋಲ್ ಶುಲ್ಕಗಳನ್ನು ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ ಮತ್ತು ಹೆದ್ದಾರಿ ನಿರ್ವಾಹಕರು ಸೋಮವಾರದಿಂದ ಸುಮಾರು 1,100 ಟೋಲ್ ಪ್ಲಾಜಾಗಳಲ್ಲಿ 3% ರಿಂದ 5% ರಷ್ಟು ಹೆಚ್ಚಳ ಮಾಡಲಿದ್ದು, ಸ್ಥಳೀಯ ಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ನೀತಿ ಸಂಹಿತೆ ಕಾರಣ ತಡೆಹಿಡಿಯಲಾದ ಬಳಕೆದಾರರ ಶುಲ್ಕ ದರಗಳ ಪರಿಷ್ಕರಣೆಯು ಜೂನ್ 3 ರಿಂದ ಜಾರಿಗೆ ಬರಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಯಾಣಿಕರ ಮೇಲೂ ಭಾರೀ ಹೊರೆ

ಟೋಲ್ ಶುಲ್ಕಗಳು ಮತ್ತು ಇಂಧನ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳವು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗ ಮತ್ತು ಅಭಿವೃದ್ಧಿಗೆ ಸಹಾಯ ಮಾಡಲಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿರೋಧ ಪಕ್ಷಗಳು ಹಾಗೂಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಲ್ ದರ ಹೆಚ್ಚಳದಿಂದ ಅಗತ್ಯ ಸರಕುಗಳ ಸಾರಿಗೆ ವೆಚ್ಚ ಹೆಚ್ಚಾಗುತ್ತದೆ ಮತ್ತು ಪ್ರಯಾಣಿಕರಿಗೆ ಇದು ಹೊರೆಯಾಗಲಿದೆ ಎಂದು ಕಿಡಿ ಕಾರಿದ್ದಾರೆ.

ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಅಶೋಕ್ ಬಿಲ್ಡ್‌ಕಾನ್ ಲಿಮಿಟೆಡ್‌ನಂತಹ ಟೋಲ್ ಪ್ಲಾಜಾಗಳನ್ನು ನಿರ್ವಹಣೆ ಮಾಡುವವರು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಭಾರತ ಕಳೆದ ದಶಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಣೆ ಮತ್ತು ಅಭಿವೃದ್ಧಿಗೆ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿದೆ, ಸುಮಾರು 146,000 ಕಿಲೋಮೀಟರ್‌ಗಳಷ್ಟು ಹೆದ್ದಾರಿ ನಿರ್ಮಿಸಲಾಗಿದೆ

ಇದನ್ನೂ ಓದಿ: Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

ಈ ಹಿಂದೆ ಹಣಕಾಸು ವರ್ಷದ ಆರಂಭದಲ್ಲೇ ರಾಜ್ಯದ ವಾಹನ ಸವಾರರಿಗೆ ಮತ್ತೆ ಟೋಲ್‌ ಬರೆ ಬಿದ್ದಿತ್ತು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸೇರಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ದರ (Toll Hike) ಏರಿಸಲಾಗಿತ್ತು. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಟೋಲ್‌ ದರ ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣಕ್ಕೆ ದರ ಹೆಚ್ಚಳವನ್ನು ಕೈ ಬಿಟ್ಟಿತ್ತು. ಆ ಬಳಿಕ ಜೂನ್‌ನಲ್ಲಿ ಏಕಾಏಕಿ ಶೇ.22ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಇದಾದ ಬಳಿಕ 9 ತಿಂಗಳ ನಂತರ ಮತ್ತೆ ಟೋಲ್‌ ದರ ಏರಿಕೆ ಆಗಿತ್ತು.

Exit mobile version