ಸದ್ಯ ದೇಶದಲ್ಲಿ ಸಿಕ್ಕಾಪಟೆ ಗದ್ದಲ ಮಾಡುತ್ತಿರುವುದು ಟೊಮ್ಯಾಟೊ. ಅಡುಗೆ ಮನೆಯ ಕಾಯಂ ಸದಸ್ಯನಾಗಿರುವ ಟೊಮ್ಯಾಟೊ ಬೆಲೆ (Tomato Price) ಆಕಾಶದೆತ್ತರಕ್ಕೆ ಏರಿಕೆಯಾಗುತ್ತಿದೆ. ದೇಶದ ಕೆಲವು ನಗರಗಳಲ್ಲಿ ಇದರ ಬೆಲೆ ಕೆಜಿಗೆ 150 ರೂಪಾಯಿ ದಾಟಿದೆ. ಅಂದರೆ ಒಂದು ಲೀಟರ್ ಪೆಟ್ರೋಲ್ ಬೆಲೆಗಿಂತಲೂ ಹೆಚ್ಚಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಟೊಮ್ಯಾಟೊವನ್ನು ಕೆಜಿಗೆ 160 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ಕೇಂದ್ರ ಸರ್ಕಾರವು ಟೊಮ್ಯಾಟೊ ಬೆಲೆ ಕಡಿಮೆ ಮಾಡಲು ಐಡಿಯಾ ಕೊಡಿ ಎಂದು ಜನರ ಬಳಿಯೇ ಕೇಳಿದೆ. ಹಾಗೇ, ಬೇಡಿಕೆ ಹೆಚ್ಚಿದ್ದರಿಂದ ಬೆಲೆಯೂ ಭರ್ಜರಿ ಏರಿದೆ. ಇನ್ನು 15ದಿನಗಳಲ್ಲಿ ಬೆಲೆ ತಗ್ಗುತ್ತದೆ ಎಂದು ಹೇಳಿದೆ.
ಬೆಂಗಳೂರಲ್ಲೂ ಕೂಡ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಇಲ್ಲಿ ಕೆಜಿಗೆ 100ರ ಗಡಿ ದಾಟಿ 10 ದಿನಗಳ ಮೇಲಾಯಿತು. ಸ್ಥಳೀಯ ತಳಿಯ ಟೊಮ್ಯಾಟೊ ಕೆಜಿಗೆ 105 ರೂ.ದಿಂದ 120 ರೂ.ವರೆಗೆ, ಹೈಬ್ರೀಡ್ ತಳಿ ಕೆಜಿಗೆ 140 ರೂ.ಗೆ ಮಾರಾಟವಾಗುತ್ತಿದೆ. ದೇಶದಲ್ಲಿ ಸದ್ಯ ಪೆಟ್ರೋಲ್ ದರ ಲೀಟರ್ಗೆ 95ರೂ.ದಿಂದ 110 ರೂ.ವರೆಗೆ ಇದೆ. ಬೆಂಗಳೂರಲ್ಲಿ ಲೀಟರ್ಗೆ 101.94 ರೂಪಾಯಿ ಇದ್ದರೆ, ವಿಶಾಖಪಟ್ಟಣದಲ್ಲಿ 110.48 ರೂಪಾಯಿ ಇದೆ. ಬಹುತೇಕ ಎಲ್ಲ ನಗರಗಳಲ್ಲೂ ಹೀಗೆ ಪೆಟ್ರೋಲ್ ದರವನ್ನು ಟೊಮ್ಯಾಟೊ ಬೆಲೆ ಹಿಂದಿಕ್ಕಿ ಮುನ್ನುಗ್ಗಿದೆ. ಹಣ್ಣಾದರೂ, ತರಕಾರಿಯ ರೂಪದಲ್ಲಿ ಪ್ರತಿ ಮನೆಯ ಅಡುಗೆ ಮನೆ ಆಳುವ ಟೊಮ್ಯಾಟೊ ಈಗ ಗ್ರಾಹಕರ ಜೇಬನ್ನು ಕತ್ತರಿಸುತ್ತಿದೆ.
ಇದನ್ನೂ ಓದಿ: Tomato Challenge: ‘ಟೊಮ್ಯಾಟೊ ಬೆಲೆ ಇಳಿಸಲು ಐಡಿಯಾ ಕೊಡಿ’ ಅಭಿಯಾನ; ನೀವೂ ಭಾಗವಹಿಸಿ
ಮುಂಗಾರು ವಿಳಂಬವಾಗಿ ಮಳೆಯಾಗದೆ ಇರುವುದು, ಹೆಚ್ಚಿದ ಬೇಡಿಕೆ ಮತ್ತಿತರ ಕಾರಣಗಳಿಂದ ಟೊಮ್ಯಾಟೊ ಬೆಲೆ ಏರಿದೆ. ಇದು ಟೊಮ್ಯಾಟೊ ಬೆಳೆಗಾರರಿಗೆ ಸಖತ್ ಖುಷಿ ಕೊಟ್ಟಿದೆ. ಆದರೆ ದುಬಾರಿ ಬೆಲೆಯಿಂದಾಗಿ ಬೀದಿ ಬದಿ ವ್ಯಾಪಾರಿಗಳ ಬುಟ್ಟಿಯಿಂದ ಟೊಮ್ಯಾಟೊ ಕಳ್ಳತನದ ಪ್ರಕರಣಗಳೂ ವರದಿಯಾಗುತ್ತಿವೆ. ಹೀಗೆ ಸಂತೆಯಲ್ಲಿ ಟೊಮ್ಯಾಟೊ ಕಳವಾಗುವುದನ್ನು ತಪ್ಪಿಸಲು ಹಾವೇರಿ ಜಿಲ್ಲೆಯ ಅಕ್ಕಿಆಲೂರಿನ ರೈತನೊಬ್ಬ ತನ್ನ ಟೊಮ್ಯಾಟೊ ಅಂಗಡಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಏರಿದ ಟೊಮ್ಯಾಟೊ ಬೆಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಮನೆಮನೆಗೆ ನ್ಯಾಯೋಚಿತ ಬೆಲೆಯಲ್ಲಿ ತರಕಾರಿಗಳನ್ನು ತಲುಪಿಸಲು ಸರ್ಕಾರವೇ ಶುರು ಮಾಡಿರುವ ‘ಸಫಲ್ ಬಾಂಗ್ಲಾ’ ಎಂಬ ಚಿಲ್ಲರೆ ವ್ಯಾಪಾರಿಗಳ ಜಾಲಕ್ಕೆ, ಸಿಎಂ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದು, ‘ಕಡಿಮೆ ಬೆಲೆಯಲ್ಲಿ ಟೊಮ್ಯಾಟೊ ನೀಡುವಂತೆ’ ಹೇಳಿದ್ದಾರೆ.