ಡೆಹ್ರಾಡೂನ್: ಕಳೆದ ಒಂದು ತಿಂಗಳಿಂದ ಟೊಮ್ಯಾಟೊ ಬೆಲೆ ದೇಶಾದ್ಯಂತ ಏರಿಕೆಯಾದ (Tomato Price Hike) ಕಾರಣ ಜನ ಬಸವಳಿದು ಹೋಗಿದ್ದಾರೆ. ಒಂದು ಕೆ.ಜಿ ಟೊಮ್ಯಾಟೊಗೆ 100 ರೂಪಾಯಿಗಿಂತ ಹೆಚ್ಚಿನ ಹಣ ನೀಡಬೇಕಾದ ಕಾರಣ ಅಡುಗೆಗೆ ಟೊಮ್ಯಾಟೊ ಬದಲು ಹುಣಸೆ ಹುಳಿ ಹಿಂಡುವಂತಾಗಿದೆ. ಅಷ್ಟರಮಟ್ಟಿಗೆ ಟೊಮ್ಯಾಟೊ ಬೆಲೆಯೇರಿಕೆಯು ಜನರ ಜೇಬು ಸುಡುತ್ತಿದೆ. ಇದರ ಬೆನ್ನಲ್ಲೇ, ಟೊಮ್ಯಾಟೊ ಬೆಲೆ ಇಳಿಕೆಯಾಗುವ ಯಾವ ಲಕ್ಷಣವೂ ಕಾಣದ ಕಾರಣ ಉತ್ತರಾಖಂಡದ ಜನ ನೇಪಾಳಕ್ಕೆ ಹೋಗಿ ಟೊಮ್ಯಾಟೊ ಖರೀದಿಸಲು ತೀರ್ಮಾನಿಸಿದ್ದಾರೆ.
ಹೌದು, ಉತ್ತರಾಖಂಡದ ಪಿತೋರಾಗಢ ಜಿಲ್ಲೆಯ ನಾಗರಿಕರು ನೇಪಾಳ ಗಡಿ ದಾಟಿ, ಅಲ್ಲಿಂದ ಕಡಿಮೆ ಬೆಲೆಗೆ ಟೊಮ್ಯಾಟೊ ಖರೀದಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ದರ್ಚುಲಾ ಹಾಗೂ ಬನ್‌ಬಾಸ ಗ್ರಾಮಗಳು ನೇಪಾಳ ಗಡಿಗೆ ಹತ್ತಿರ ಇವೆ. ಹಾಗಾಗಿ, ಈ ಗ್ರಾಮಗಳ ನಾಗರಿಕರು ಅಲ್ಲಿಗೆ ಹೋಗಿ ಕಡಿಮೆ ಬೆಲೆಗೆ ಟೊಮ್ಯಾಟೊ ಖರೀದಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ನೇಪಾಳ ಗಡಿ ಪ್ರವೇಶಿಸಲು ಹೆಚ್ಚಿನ ನಿಯಮಗಳು ಇಲ್ಲದ ಕಾರಣ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ನೇಪಾಳದಲ್ಲಿ ಟೊಮ್ಯಾಟೊ ಬೆಲೆ ಎಷ್ಟು?
ಭಾರತಕ್ಕಿಂತ ನೇಪಾಳದಲ್ಲಿ ಟೊಮ್ಯಾಟೊ ಬೆಲೆ ಕಡಿಮೆ ಇದೆ. ನೇಪಾಳಿ ರೂಪಾಯಿಯಲ್ಲಿ ಟೊಮ್ಯಾಟೊ ಬೆಲೆ ಕೆ.ಜಿ.ಗೆ 100 ರೂ.ನಿಂದ 110 ರೂ. ಇದೆ. ಅಂದರೆ, ಭಾರತದ 60-65 ರೂ. ನೀಡಿದರೆ ನೇಪಾಳದಲ್ಲಿ 1 ಕೆ.ಜಿ ಟೊಮ್ಯಾಟೊ ಸಿಗುತ್ತದೆ. ಈಗಾಗಲೇ ಒಂದಷ್ಟು ಜನ ನೇಪಾಳಕ್ಕೆ ಹೋಗಿ ಟೊಮ್ಯಾಟೊ ಖರೀದಿ ಮಾಡಿದ್ದು, ಇದರಿಂದ ನೇಪಾಳದ ವ್ಯಾಪಾರಿಗಳಿಗೂ ಭಾರಿ ಅನುಕೂಲವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Tomato Crop: 2000 ಬಾಕ್ಸ್ ಟೊಮ್ಯಾಟೊ ಮಾರಿ 38 ಲಕ್ಷ ರೂ. ಗಳಿಸಿದ ಕೋಲಾರದ ರೈತ ಸೋದರರು!
“ಪಿತೋರಾಗಢ ಜಿಲ್ಲೆಯು ನೇಪಾಳ ಗಡಿಯಾಗಿದೆ. ಭಾರತದ ಜನ ನೇಪಾಳಕ್ಕೆ, ನೇಪಾಳದ ಜನ ಭಾರತಕ್ಕೆ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ರೂಢಿಯಾಗಿದೆ” ಎಂದು ಪಿತೋರಾಗಢ ಜಿಲ್ಲಾಧಿಕಾರಿ ರೀನಾ ಜೋಶಿ ತಿಳಿಸಿದ್ದಾರೆ. ಜನ ಒಮ್ಮೆ ತೆರಳಿ ನಾಲ್ಕೈದು ಕೆ.ಜಿ ಟೊಮ್ಯಾಟೊ ಖರೀದಿಸಿದರೆ 250-300 ರೂ. ಉಳಿಸಲಿದ್ದಾರೆ. ಇದರಿಂದಾಗಿ ಬ್ಯಾಗ್ ಹಿಡಿದು ನೇಪಾಳದತ್ತ ಹೊರಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ಬಹುತೇಕ ಕಡೆ ಟೊಮ್ಯಾಟೊ ಬೆಲೆ ಕೆ.ಜಿ.ಗೆ 100 ರೂ. ದಾಟಿರುವ ಕಾರಣ ಜನ ಟೊಮ್ಯಾಟೊ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಟೊಮ್ಯಾಟೊ ಕಳ್ಳತನದಂತಹ ಪ್ರಕರಣಗಳು ಕೂಡ ಕಂಡುಬಂದಿವೆ. ದೇಶದ ಹಲವೆಡೆ ಟೊಮ್ಯಾಟೊ ಕಳ್ಳತನ ತಡೆಯಲು ಸಿಸಿಟಿವಿ ಅಳವಡಿಸಲಾಗಿದೆ.