ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ರೈತರೊಬ್ಬರು ಕೇವಲ ಟೊಮ್ಯಾಟೊ ಮಾರಿ ಬರೋಬ್ಬರಿ 2.8 ಕೋಟಿ ರೂ. ಗಳಿಸಿದ್ದಾರೆ! ಅರೆ, ಇದು ಹೇಗೆ ಸಾಧ್ಯ ಎನ್ನುತ್ತೀರಾ? ಈಗ ಎಲ್ಲೆಲ್ಲೂ ಟೊಮ್ಯಾಟೊ ದರ ಏರಿಕೆಯದ್ದೇ ಮಾತು. ಮನೆಯಿಂದ ಶುರುವಾಗಿ ರೆಸ್ಟೊರೆಂಟ್‌ಗಳ ತನಕ ಎಲ್ಲ ಕಡೆಗಳಲ್ಲಿ ಟೊಮ್ಯಟೊವನ್ನು ಎಣಿಸಿ ಬಳಸುವಷ್ಟು ಅಮೂಲ್ಯವಾಗಿದೆ. (Tomato price hike) ಕಾರಣ ಮಾರುಕಟ್ಟೆಗೆ ಪೂರೈಕೆ ಅರ್ಧಕ್ಕರ್ಧ ಕುಸಿದಿರುವುದು. ಇದರ ಪರಿಣಾಮ ಕೆಲವು ರೈತರು ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ. ಪುಣೆಯ ಬಳಿ ರೈತರೊಬ್ಬರು ಟೊಮ್ಯಾಟೊ ಮಾರಾಟದ ಮೂಲಕ ಬರೋಬ್ಬರಿ 2.8 ಕೋಟಿ ರೂ. ಆದಾಯ ಗಳಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಆದಾಯ 3.5 ಕೋಟಿ ರೂ.ಗೆ ಏರಿಕೆಯಾಗುವ ಅಂದಾಜಿದೆ ಎಂದು ಹೇಳಿದ್ದಾರೆ.
ಪುಣೆಯ ಜುನ್ನಾರ್ ತಾಲ್ಲೂಕಿನ ಈಶ್ವರ್ ಗಾಯ್ಕರ್ ಅವರ ಬಳಿ ಈಗಲೂ 4,000 ಬುಟ್ಟಿ ಟೊಮ್ಯಾಟೊ ದಾಸ್ತಾನು ಇದೆ. ನಂಬಲು ಅಸಾಧ್ಯವಾಗುವಷ್ಟು ಆದಾಯ ಗಳಿಸಿರುವ ಈಶ್ವರ್ ಅವರು ಹೀಗೆನ್ನುತ್ತಾರೆ- ನಾನು ಟೊಮ್ಯಾಟೊ ಬೆಳೆಯನ್ನು ಕಳೆದ ಆರೇಳು ವರ್ಷಗಳಿಂದಲೂ ಬೆಳೆಯುತ್ತಿದ್ದೇನೆ. ಹಲವು ಸಲ ನನಗೆ ನಷ್ಟವೂ ಆಗಿದೆ. 2021ರಲ್ಲಿ 18-20 ಲಕ್ಷ ರೂ. ನಷ್ಟವಾಗಿತ್ತು. ಆದರೆ ಆಗಲೂ ಟೊಮ್ಯಾಟೊ ಕೃಷಿಯನ್ನು ಬಿಟ್ಟಿರಲಿಲ್ಲ.
ಈ ವರ್ಷ ಇದುವರೆಗೆ ನಾನಯ ಹನ್ನೆರಡು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದೇನೆ. ನಾನು 17000 ಬುಟ್ಟಿ (ಪೆಟ್ಟಿಗೆ) ಟೊಮ್ಯಾಟೊ ಮಾರಿದ್ದೇನೆ. ಪ್ರತಿ ಬುಟ್ಟಿಗೆ 2311 ರೂ. ಲಭಿಸಿದೆ. ಒಟ್ಟು ಇದುವರೆಗೆ 2.8 ಕೋಟಿ ರೂ. ಗಳಿಸಿದ್ದೇನೆ. ಇನ್ನೂ 3-4 ಸಾವಿರ ಬುಟ್ಟಿ ಟೊಮ್ಯಾಟೊ ಇದೆ. ಹೀಗಾಗಿ 3.5 ಕೋಟಿ ರೂ. ಗಳಿಸುವ ಅಂದಾಜಿದೆ ಎನ್ನುತ್ತಾರೆ ಬೆಳೆಗಾರ ಈಶ್ವರ್ ಗಾಯ್ಕರ್.
ಟೊಮ್ಯಾಟೊ ಬೆಳೆಯಲ್ಲಿ ಲಭಿಸಿದ ಈ ಯಶಸ್ಸಿನ ಹಿಂದೆ ಪತ್ನಿಯ ಬೆಂಬಲ ಕೂಡ ಇದೆ. ನನ್ನ ಹೆತ್ತವರ ಆಶೀರ್ವಾದ, ನನ್ನ ಮತ್ತು ಪತ್ನಿಯ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ನನ್ನ ಕುಟುಂಬದ ಎಲ್ಲ ಸದಸ್ಯರು ಇದರಲ್ಲಿ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Tomato price : ಟೊಮ್ಯಾಟೊ ಹೋಲ್‌ಸೇಲ್ ದರವನ್ನು ಕೆ.ಜಿಗೆ 80 ರೂ.ಗೆ ಕಡಿತಗೊಳಿಸಿದ ಕೇಂದ್ರ ಸರ್ಕಾರ
ಪ್ರತಿ ಕೆಜಿಗೆ 30 ರೂ. ದರ ಸಿಗಬಹುದು ಎಂದು ಆರಂಭದಲ್ಲಿ ಈಶ್ವರ್ ಗಾಯ್ಕರ್ ಭಾವಿಸಿದ್ದರು. ಆದರೆ ದರ ಗಗನಕ್ಕೇರಿ ಅವರ ಅದೃಷ್ಟ ಖುಲಾಯಿಸಿತ್ತು. ಶುಕ್ರ ದೆಸೆ ಉಂಟಾಗಿತ್ತು. 2005ರಲ್ಲಿ ದಂಪತಿ ಕೇವಲ ಒಂದೆಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದರು. ಅದನ್ನು 2017ರ ವೇಳೆಗೆ 12 ಎಕರೆಗೆ ವಿಸ್ತರಿಸಿದ್ದರು.