ನವದೆಹಲಿ: ಟೊಮೆಟೋಗಳ ದರ ಗಗನಕ್ಕೇರಿದೆ(Tomato Price in Delhi). ಇದರಿಂದ ಸಾಮಾನ್ಯರ ಜೇಬಿಗೆ ತೀವ್ರ ಕತ್ತರಿ ಬಿದ್ದಿದೆ. ಜನರ ಬವಣೆಯನ್ನು ನೀಗಿಸುವುದಕ್ಕಾಗಿ ಸರ್ಕಾರವೇ ದಿಲ್ಲಿಯಲ್ಲಿ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಾಟ ಮಾಡುತ್ತಿದೆ. ನ್ಯಾಷನಲ್ ಕೋ ಆಪರೇಟಿವ್ ಕನ್ಸೂಮರ್ ಫೆಡರೇಷನ್ ಆಫ್ ಇಂಡಿಯಾ (NCCF) ಶುಕ್ರವಾರ ಕೆಜಿಗೆ 90 ರೂ. ದರದಲ್ಲಿ ಟೊಮೆಟೋಗಳನ್ನು ಮಾರಾಟ ಮಾಡಿದೆ.
ದಿಲ್ಲಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಟೊಮೆಟೋಗಳು ರಫ್ತು ಗುಣಮಟ್ಟವನ್ನು ಹೊಂದಿವೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ತರಿಸಲಾಗಿದೆ. ದಿಲ್ಲಿ ಸೇರಿ ಐದು ರಾಜ್ಯಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಸರ್ಕಾರವು ಸೂಚನೆಯನ್ನು ನೀಡಿದೆ. ನಮಗೆ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ದಿಲ್ಲಿ ಮೂರು ರಾಜ್ಯಗಳನ್ನು ವಹಿಸಲಾಗಿದೆ ಎಂದು ಎನ್‌ಸಿಸಿಎಫ್ ಅಧ್ಯಕ್ಷ ವಿಶಾಲ್ ಸಿಂಗ್ ಅವರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF)ಗೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ತಕ್ಷಣವೇ ಟೊಮ್ಯಾಟೊವನ್ನು ಖರೀದಿಸಲು ನಿರ್ದೇಶನ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಈ ಸುದ್ದಿಗಳನ್ನೂ ಓದಿ: Tomato Price: ಟೊಮ್ಯಾಟೊ ಬೆಳೆದು 30 ಲಕ್ಷ ರೂ. ಸಂಪಾದಿಸಿದ ರೈತನ ಬರ್ಬರ ಹತ್ಯೆ
ಟೊಮೆಟೊ ರಿಯಾಯ್ತಿಗಳಿಗಾಗಿ ವಿತರಣಾ ಕೇಂದ್ರಗಳ ಆಯ್ಕೆಯು ಹಿಂದಿನ ತಿಂಗಳಿಗೆ ಹೋಲಿಸಿದರೆ ಚಿಲ್ಲರೆ ಬೆಲೆಗಳಲ್ಲಿನ ಗಮನಾರ್ಹ ಹೆಚ್ಚಳವನ್ನು ಆಧರಿಸಿದೆ. ನಿರ್ದಿಷ್ಟವಾಗಿ ಬೆಲೆಗಳು ರಾಷ್ಟ್ರೀಯ ಸರಾಸರಿಯನ್ನು ಮೀರಿದ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.