ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Bhagwat) ಅವರನ್ನು ಮುಸ್ಲಿಂ ಮೌಲ್ವಿಯೊಬ್ಬರು “ರಾಷ್ಟ್ರಪಿತ” (Rashtra Pita) ಎಂದು ಕರೆದಿದ್ದಾರೆ. ದೆಹಲಿಯಲ್ಲಿರುವ ಮಸೀದಿಗೆ ಭೇಟಿ ನೀಡಿದ ಬಳಿಕ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ನ ಮುಖ್ಯ ಮೌಲ್ವಿ ಉಮರ್ ಅಹ್ಮದ್ ಇಲ್ಯಾಸಿ (Umer Ahmed Ilyasi) ಅವರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ಉಮರ್ ಅಹ್ಮದ್ ಅವರು ಭಾಗವತ್ ಅವರನ್ನು ರಾಷ್ಟ್ರಪಿತ ಎಂದಿದ್ದಾರೆ.
“ನಮ್ಮ ಡಿಎನ್‌ಎ (ಹಿಂದೂಗಳು ಹಾಗೂ ಮುಸ್ಲಿಮರು) ಒಂದೇ ಆಗಿದೆ. ಆದರೆ, ನಾವು ದೇವರನ್ನು ಆರಾಧಿಸುವ ರೀತಿ ಮಾತ್ರ ಬೇರೆಯಾಗಿದೆ” ಎಂದು ಇಲ್ಯಾಸಿ ಹೇಳಿದ್ದಾರೆ. ಇದಕ್ಕೂ ಮೊದಲು, ಭಾಗವತ್ ಅವರೂ ಹಲವು ಬಾರಿ ಹಿಂದೂಗಳು ಹಾಗೂ ಮುಸ್ಲಿಮರ ಡಿಎನ್‌ಎ ಒಂದೇ ಎಂದಿದ್ದರು.
ಇಲ್ಯಾಸಿ ಪುತ್ರ ಸುಹೈಬ್ ಇಲ್ಯಾಸಿ ಸಹ ಮಾತನಾಡಿದ್ದು, “ನಮ್ಮ ಭೇಟಿಯು ದೇಶಕ್ಕೆ ಸೌಹಾರ್ದದ ಸಂದೇಶ ಸಾರುತ್ತಿದೆ. ನಾವು ಕುಟುಂಬಸ್ಥರ ರೀತಿ ಚರ್ಚೆ, ಮಾತುಕತೆ ನಡೆಸಿದ್ದೇವೆ. ನಮ್ಮ ಆಹ್ವಾನಕ್ಕೆ ಬೆಲೆ ಕೊಟ್ಟು, ಭಾಗವತ್ ಅವರು ಆಗಮಿಸಿದ್ದು ಸಂತಸ ತಂದಿದೆ” ಎಂದಿದ್ದಾರೆ. ಮಸೀದಿ ಭೇಟಿ ಜತೆಗೆ ಇಸ್ಲಾಂ ಧರ್ಮದ ಹಲವು ಮುಖಂಡರ ಜತೆಗೂ ಭಾಗವತ್ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ | RSS Chief Bhagwat | ಮುಸ್ಲಿಮ್ ಪ್ರಮುಖರ ಜತೆ ಭಾಗವತ್! ಕಾಫಿರ್, ಗೋಹತ್ಯೆ, ಜಿಹಾದಿ, ಪಾಕಿಸ್ತಾನಿ ಇತ್ಯಾದಿ ಚರ್ಚೆ