ನವದೆಹಲಿ: ದಾನ ಮಾಡುವುದು (Charity Begins at Home), ಅತಿಥಿಗಳನ್ನು ದೇವರೆಂದು ಕಾಣುವುದು, ದಯೆ ತೋರುವುದು ಸೇರಿ ಹಲವು ಮೌಲ್ಯಗಳು ಭಾರತದಲ್ಲಿ ಹಾಸುಹೊಕ್ಕಾಗಿವೆ. ಈ ಮಾತಿಗೆ ನಿದರ್ಶನ ಎಂಬಂತೆ, ೨೦೨೦-೨೧ನೇ ಸಾಲಿನಲ್ಲಿ ದೇಶದ ಜನ ೨೩,೭೦೦ ಕೋಟಿ ರೂಪಾಯಿಯನ್ನು ದಾನವಾಗಿಯೇ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಶೋಕ ವಿಶ್ವವಿದ್ಯಾಲಯದ ದಿ ಸೆಂಟರ್ ಫಾರ್ ಸೋಷಿಯಲ್ ಇಂಪ್ಯಾಕ್ಟ್ ಆ್ಯಂಡ್ ಫಿಲಾಂಥ್ರಪಿ (ಸಿಎಸ್ಐಪಿ) ವಿಭಾಗವು ಈ ಕುರಿತು ಸಮೀಕ್ಷೆ ನಡೆಸಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆಯೂ ೨೦೨೦-೨೧ನೇ ಸಾಲಿನಲ್ಲಿ ೨೩,೭೦೦ ಕೋಟಿ ರೂ. ದಾನ ಮಾಡಲಾಗಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಹಣ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಒಟ್ಟು ಹಣದಲ್ಲಿ ಶೇ.೭೦ರಷ್ಟು ಅಂದರೆ, ೧೬.೬೦೦ ಕೋಟಿ ರೂಪಾಯಿಯನ್ನು ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡಲಾಗಿದೆ. ಶೇ.೧೨ರಷ್ಟು ಅಂದರೆ, ೨,೯೦೦ ಕೋಟಿ ರೂಪಾಯಿಯನ್ನು ಭಿಕ್ಷುಕರಿಗೆ ನೀಡಲಾಗಿದೆ. ಸುಮಾರು ೨ ಸಾವಿರ ಕೋಟಿ ರೂಪಾಯಿಯನ್ನು ಗೆಳೆಯರು ಹಾಗೂ ಕುಟುಂಬಸ್ಥರಿಗೆ ನೆರವಿನ ರೂಪದಲ್ಲಿ ಕೊಡಲಾಗಿದೆ. ಉಳಿದ ಹಣವು ಮನೆಕೆಲಸದವರಿಗೆ ನೆರವು, ಧಾರ್ಮಿಕೇತರ ಸಂಸ್ಥೆಗಳಿಗೆ ದಾನದ ರೀತಿಯಲ್ಲಿ ನೀಡಲಾಗಿದೆ ಎಂದು ವರದಿ ತಿಳಿಸಿದೆ. ದೇಶದ ಸುಮಾರು ೮೧ ಸಾವಿರ ಮನೆಗಳು, ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ವರದಿ ತಯಾರಿಸಲಾಗಿದೆ.
ಇದನ್ನೂ ಓದಿ | Mukesh Ambani | ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ಕಾಣಿಕೆ ನೀಡಿದ ಮುಕೇಶ್ ಅಂಬಾನಿ