Site icon Vistara News

Parliament Session: ಅಮಿತ್ ಶಾ ಹೇಳಿಕೆಗೆ ಆಗ್ರಹಿಸುತ್ತಿದ್ದ 90 ಸಂಸದರು ಅಮಾನತು!

Rajya Sabha Election

ನವದೆಹಲಿ: ಸಂಸತ್ ಭದ್ರತಾ ಲೋಪ (Parliament Security Breach) ಕುರಿತು ಚರ್ಚೆಗೆ ಆಗ್ರಹಿಸುತ್ತಿದ್ದ ಲೋಕಸಭೆ (Lok Sabha) ಮತ್ತು ರಾಜ್ಯಸಭೆಯ (Rajya Sabha) ಒಟ್ಟು 79 ಸಂಸದರನ್ನು ಸೋಮವಾರ ಸಸ್ಪೆಂಡ್ (MPs Suspended) ಮಾಡಲಾಗಿದೆ. ಈ ಪೈಕಿ ರಾಜ್ಯಸಭೆಯ 45 ಸಂಸದರಿದ್ದಾರೆ. ಕಳೆದ ವಾರ ಸಂಭವಿಸಿದ ಸಂಸತ್ ಭದ್ರತಾ ಲೋಪ ಕುರಿತು ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home minister Amit Shah) ಅವರಿಂದ ಹೇಳಿಕೆಗೆ ಆಗ್ರಹಿಸುತ್ತಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವಾರ 14 ಸಂಸದರನ್ನು ಸಸ್ಪೆಂಡ್ ಮಾಡಲಾಗಿತ್ತು. ಇದರೊಂದಿಗೆ ಒಟ್ಟು 90 ಸಂಸದರನ್ನು ಅಮಾನತು ಮಾಡಿದಂತಾಗಿದೆ.

ಉಳಿದ ಅಧಿವೇಶನಕ್ಕೆ ಅನ್ವಯವಾಗುವಂತೆ ಲೋಕಸಭೆ 30 ಸಂಸದರನ್ನು ಅಮಾನತು ಮಾಡಲಾಗಿದ್ದರೆ, ಮೂವರನ್ನು ಹಕ್ಕು ಬಾಧ್ಯತಾ ವರದಿ ನೀಡೋವರೆಗೂ ಸಸ್ಪೆಂಡ್ ಮಾಡಲಾಗಿದೆ. ಹಾಗೆಯೇ ರಾಜ್ಯಸಭೆಯಿಂದ 35 ಸದಸ್ಯರನ್ನು ಅಮಾನತು ಮಾಡಲಾಗಿದ್ದು, 11 ಸದಸ್ಯರ ಕುರಿತು ಹಕ್ಕು ಬಾಧ್ಯತಾ ಸಮಿತಿ ವರದಿ ನೀಡೋವರೆಗೂ ಸಸ್ಪೆಂಡ್ ಮುಂದುವರಿಯಲಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಸದನ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ, ಉಪ ನಾಯಕ ಗೌರವ್ ಗೋಗೊಯಿ, ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಾಸ್ತಿದಾರ್, ಸೌಗತ್ ರಾಯ್, ಸತಬ್ದಿ ರಾಯ್ ಮತ್ತು ಡಿಎಂಕೆ ಸಂಸದರಾದ ಎ ರಾಜಾ, ದಯಾನಿಧಿ ಮಾರನ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್ ರಂಜನ್ ಚೌಧರಿ ಅವರು, ಕೇಂದ್ರ ಸರ್ಕಾರವು ಸರ್ವಾಧಿಕಾರದ ತುತ್ತ ತುದಿಯನ್ನು ತಲುಪಿದೆ. ಅವರಿಗೆ ಬಹುಮತವಿದೆ ಮತ್ತು ಅಧಿಕಾರದೊಂದಿಗೆ ಜಿಗುಟತನವನ್ನು ಪ್ರದರ್ಶಿಸಿದ್ದಾರೆ. ಅವರು ಸಂಸತ್ತನ್ನು ತಮ್ಮ ಪಕ್ಷದ ಕಚೇರಿ ರೀತಿ ನಡೆಸಲು ಬಯಸುತ್ತಿದ್ದಾರೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಡಿಸೆಂಬರ್ 13ಕ್ಕಿಂತ ಮುಂಚಿನ ಸಂಸತ್ತಿನ ಉತ್ಪಾದಕೆಯನ್ನು ಎಲ್ಲರೂ ಕಂಡಿದ್ದಾರೆ. ಅವರಿಗೆ ಮಾಧ್ಯಮಗಳೊಂದಿಗೆ ಮಾತನಾಡುವುದು ಸುಲಭ. ಆದರೆ, ಸಂಸತ್ತಿನಲ್ಲಿ ಮಾತನಾಡಲು ಹೆದರುತ್ತಿದ್ದಾರೆ ಎಂದು ಹೇಳಿದರು.

ಈಗ ಪ್ರತಿಪಕ್ಷ ರಹಿತ ಸಂಸತ್ ಸೃಷ್ಟಿಯಾಗಿದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಿ, ಯಾವುದೇ ಚರ್ಚೆಯಿಲ್ಲದೇ ಸರ್ಕಾರವು ಕಾನೂನುಗಳನ್ನು ಪಾಸು ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.

ಪ್ರತಿಪಕ್ಷಗಳ ಒಟ್ಟು 30 ಸಂಸದರು ಲೋಕಸಭೆಯಿಂದ ಅಮಾನತು

ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿರೋಧ ಪಕ್ಷಗಳ 30 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದ್ದಾರೆ. ಲೋಕಸಭಾ ಭದ್ರತಾ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಂಸದರು ಸದನದ ಒಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಅಮಾನತು ಪ್ರಕ್ರಿಯೆಗಳು ನಡೆಯುತ್ತಿದ್ದು ಒಟ್ಟು ಸದಸ್ಯರ ಸಂಖ್ಯೆ 30 ದಾಟಿದೆ.

ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಅಶಿಸ್ತಿನ ವರ್ತನೆಗಾಗಿ ಕಾಂಗ್ರೆಸ್​ನ ಒಂಬತ್ತು ಸಂಸದರು ಸೇರಿದಂತೆ 13 ಸಂಸದರನ್ನು ಅಮಾನತುಗೊಳಿಸಿದ ನಂತರ ಇದೀಗ ಹಲವರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಲ್ಲಿ ಘಟಿಸಿರುವ ಭದ್ರತಾ ಲೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಂದ ಹೇಳಿಕೆಗಳನ್ನು ನೀಡುವಂತೆ ಪ್ರತಿಪಕ್ಷಗಳು ಕಳೆದ ವಾರದಿಂದ ಒತ್ತಾಯಿಸುತ್ತಿವೆ ಹಾಗೂ ಸದಸ್ಯರು ಕಲಾಪಗಳಿಗೆ ಅಡ್ಡಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸತತವಾಗಿ ಅಮಾನತು ಮಾಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Security Breach in Lok Sabha‌: ಲೋಕಸಭೆ ಭದ್ರತಾ ವೈಫಲ್ಯ; ಮನೋರಂಜನ್‌ ರೂಂ ಸೀಜ್‌!

ಶನಿವಾರ, ಪಿಎಂ ಮೋದಿ ಸಂದರ್ಶನವೊಂದರಲ್ಲಿ ಈ ಘಟನೆಯ ಬಗ್ಗೆ ತನಿಖೆಯ ಅಗತ್ಯವಿದೆ, ಸಂಸತ್ತಿನಲ್ಲಿ ಚರ್ಚೆಯಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ಇಬ್ಬರು ಒಳನುಗ್ಗುವವರಿಗೆ ಪ್ರವೇಶ ಪತ್ರ ಕೊಟ್ಟಿದ್ದ ತಮ್ಮ ಪಕ್ಷದ ಸಂಸದ ಪ್ರತಾಪ್ ಸಿಂಹ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ವಿಷಯದ ಬಗ್ಗೆ ಚರ್ಚೆಯಿಂದ ಫಲಾಯನ ಮಾಡಲಾಗುತ್ತಿದೆ ಎಂದು ಸಂಸದರು ಆರೋಪಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು, ಕಮೆಂಟ್ ಮೂಲಕ ತಿಳಿಸಿ

Exit mobile version