ಶಿಮ್ಲಾ: ಹಿಮಾಚಲ ಪ್ರದೇಶದ ರೋಹ್ಟಂಗ್ ಪಾಸ್‌ನಲ್ಲಿ ಭಾರಿ ಪ್ರಮಾಣದ ಹಿಮಪಾತವುಂಟಾಗಿ ಅಟಲ್ ಸುರಂಗದಲ್ಲಿ ಸಿಲುಕಿದ್ದ (Atal Tunnel) 400 ವಾಹನಗಳು ಹಾಗೂ ಸಾವಿರಕ್ಕೂ ಅಧಿಕ ಜನರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಗುರುವಾರ ಸಂಚಾರ ದಟ್ಟಣೆ ಉಂಟಾಗಿದ್ದು, ಗುರುವಾರ ಸಂಜೆ 4 ಗಂಟೆಯಿಂದಲೇ ನಡೆಸಿದ ಕಾರ್ಯಾಚರಣೆ, ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆಯಿಂದಲೇ ಹಿಮಪಾತ ಶುರುವಾಗಿತ್ತು. ಹಾಗಾಗಿ, ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿ ತುಂಬ ಹಿಮ ತುಂಬಿತ್ತು. ಇದರಿಂದಾಗಿ ಅಟಲ್ ಸುರಂಗದಲ್ಲಿ ಹೆಚ್ಚಿನ ವಾಹನಗಳು ಸಿಲುಕುವಂತಾಯಿತು. ಆದರೆ, ಪೊಲೀಸರು ತಂಡಗಳನ್ನು ರಚಿಸಿ, 12 ತಾಸು ಕಾರ್ಯಾಚರಣೆ ನಡೆಸಿ ಎಲ್ಲ ವಾಹನಗಳನ್ನು ರಕ್ಷಿಸಿದ್ದಾರೆ.
ಹಿಮಪಾತದಿಂದಾಗಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಬಹುತೇಕ ವಾಹನಗಳು ಸುರಂಗದ ಮೂಲಕವೇ ಹಾದುಹೋಗಬೇಕಾದ ಕಾರಣ ಹಾಗೂ ನೂರಾರು ವಾಹನಗಳು ಸುರಂಗದಲ್ಲಿಯೇ ಸಿಲುಕಿದ ಕಾರಣ ರಕ್ಷಣಾ ಕಾರ್ಯಾಚರಣೆಯು ಸವಾಲಿನಿಂದ ಕೂಡಿತ್ತು. ಆದರೆ, ಪೊಲೀಸರು ಕೊರೆಯುವ ಚಳಿಯಲ್ಲಿ ಒಂದೊಂದೇ ವಾಹನಗಳನ್ನು ಸುರಂಗದಿಂದ ಹೊರಗೆ ಕಳುಹಿಸಿದರು.
ಇದನ್ನೂ ಓದಿ | Rain News | ಸೇತುವೆ ಮೇಲಿಂದ ಬಿದ್ದ ಲಾರಿ: ನದಿಯಲ್ಲಿ ಸಿಲುಕಿದ್ದ ಮಾಲೀಕನ ರಕ್ಷಣೆ, ಚಾಲಕ ಕಣ್ಮರೆ