ಕಾನ್ಪುರ್: ಭಕ್ತರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್ ಟ್ರಾಲಿ ಕೆರೆಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 22 ಜನರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರ್ (Kanpur) ಜಿಲ್ಲೆಯ ಘಟಂಪುರ ಬಳಿ ಶನಿವಾರ ರಾತ್ರಿ ನಡೆದಿದೆ. ಈ ಘಟನೆಯಲ್ಲಿ 24ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಸೇರಿದಂತೆ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 50 ಜನರಿದ್ದ ಟ್ರಾಕ್ಟರ್, ಉನ್ನಾವ್ ಜಿಲ್ಲೆಯ ಚಂದ್ರಿಕಾ ದೇವಿ ದರ್ಶನವನ್ನು ಪಡೆದುಕೊಂಡು ವಾಪಸ್ ಆಗುತ್ತಿದ್ದರು. ಕಾನ್ಪುರ್ ಜಿಲ್ಲೆಯ ಘಟಂಪುರ ಬಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡ ಎಲ್ಲರ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸ್ಥಳೀಯ ಆಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂತಾಪ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಹಿರಿಯ ಸಚಿವ ರಾಕೇಶ್ ಸಾಚನ್ ಮತ್ತು ಅಜಿತ್ ಪಾಲ್ ಅವರನ್ನು ನಿಯೋಜಿಸಿದ್ದಾರೆ. ಜತೆಗೆ, ಇಡೀ ಪರಿಸ್ಥಿತಿಯನ್ನು ಅವರು ನಿಯಂತ್ರಣ ಮಾಡುತ್ತಿದ್ದಾರೆ.
ಇದನ್ನೂ ಓದಿ | ತುಳಜಾಪುರ ದೇವಸ್ಥಾನದಿಂದ ದೇವಿ ದೀಪ ತರುವ ವೇಳೆ ಅಪಘಾತ, ವಾಹನ ಹರಿದು ಯುವಕ ಮೃತ್ಯು