Site icon Vistara News

Train Accident: ಪಶ್ಚಿಮ ಬಂಗಾಳದಲ್ಲಿ ಎರಡು ರೈಲುಗಳು ಡಿಕ್ಕಿ, ಚೆಲ್ಲಾಪಿಲ್ಲಿಯಾಗಿ ಬಿದ್ದ 12 ಬೋಗಿಗಳು

Train Accident In West Bengal

Train Accident: Two goods train collide at Onda railway station in West Bengal

ಕೋಲ್ಕೊತಾ: ಒಡಿಶಾದ ಬಾಲಾಸೋರ್‌ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ದುರಂತ ಸಂಭವಿಸಿ ಕೆಲವೇ ದಿನಗಳು ಕಳೆದಿವೆ. ಸುಮಾರು 275 ಜನ ಸಾವಿಗೀಡಾದ, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡ ರೈಲು ದುರಂತದ ಕರಾಳ ನೆನಪುಗಳು ಮಾಸುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ರೈಲು (Train Accident) ಅಪಘಾತ ಸಂಭವಿಸಿದೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಒಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್‌ ರೈಲುಗಳು ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಡಿಕ್ಕಿಯಾಗಿವೆ. ಇದರಿಂದಾಗಿ ಸುಮಾರು 12 ಬೋಗಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಎರಡೂ ಗೂಡ್ಸ್‌ ರೈಲುಗಳಾದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸುತ್ತಲೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಸಿಬ್ಬಂದಿಯು ಬೋಗಿಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಹಳಿ ತಪ್ಪಿ ಬಿದ್ದ ಬೋಗಿಗಳು

ಗೂಡ್ಸ್‌ ರೈಲುಗಳು ಡಿಕ್ಕಿಯಾದ ಕಾರಣ ಖರಗ್‌ಪುರ-ಬಂಕುರ-ಆದ್ರಾ ಲೈನ್‌ನಲ್ಲಿ ರೈಲುಗಳ ಸಂಚಾರ ಸ್ಥಗಿತವಾಗಿದೆ. ಡಿಕ್ಕಿಯ ರಭಸಕ್ಕೆ ಒಂದು ರೈಲಿನ ಎಂಜಿನ್‌ ಜಖಂಗೊಂಡಿದೆ. ಸಿಗ್ನಲ್‌ ಓವರ್‌ಶೂಟಿಂಗ್‌ನಿಂದಾಗಿ ಚಲಿಸುತ್ತಿದ್ದ ಒಂದು ರೈಲಿಗೆ ಮತ್ತೊಂದು ರೈಲು ಹಿಂದಿನಿಂದ ಬಂದು ಡಿಕ್ಕಿಯಾಗಿದೆ. ಹಾಗಾಗಿ, ಡಿಕ್ಕಿಯಾದ ಎಂಜಿನ್‌ ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Goods Train Derails: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ಎಲ್‌ಪಿಜಿ ಸಾಗಿಸುತ್ತಿದ್ದ ರೈಲು; ಯಾರನ್ನು ‘ಹಳಿ’ಯಬೇಕು?

ಒಡಿಶಾದ ಬಾಲಾಸೋರ್‌ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಜೂನ್‌ 2ರಂದು ಮೂರು ರೈಲುಗಳು ಡಿಕ್ಕಿಯಾಗಿ 275 ಜನ ಮೃತಪಟ್ಟಿದ್ದರು. ಇದಾದ ಬಳಿಕ ಒಡಿಶಾ ಹಾಗೂ ಮಧ್ಯಪ್ರದೇಶದಲ್ಲಿ ಎರಡು ಸಣ್ಣ ಅಪಘಾತ ಸಂಭವಿಸಿವೆ. ಸರಣಿ ಸರಣಿಯಾಗಿ ರೈಲು ಅಪಘಾತಕ್ಕೀಡಾಗುತ್ತಿರುವ ಕಾರಣ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರಾಜೀನಾಮೆ ನೀಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಹೀಗೆ ಆಗ್ರಹಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ.

Exit mobile version