Site icon Vistara News

Train Derail: “ಪ್ರಚಾರದ ಗೀಳು ಬಿಟ್ಟು ರೈಲುಗಳ ಸುರಕ್ಷತೆ ಬಗ್ಗೆ ಗಮನ ಹರಿಸಿ”- ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

Train Derail

Train Derail

ಲಖನೌ: ಉತ್ತರ ಪ್ರದೇಶ(Uttar Pradesh)ದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್​​ಪ್ರೆಸ್​​ ರೈಲು ಅಪಘಾತಕ್ಕೆ(Train Derail) ಒಳಗಾಗಿ ಇಬ್ಬರು ಮೃತಪಟ್ಟು 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಘಟನೆಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi)ಯವರನ್ನು ನೇರ ಹೊಣೆಯನ್ನಾಗಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಖರ್ಗೆ, ಯುಪಿಯಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿತಪ್ಪುವಿಕೆಯು ಮೋದಿ ಸರ್ಕಾರವು ಹೇಗೆ ವ್ಯವಸ್ಥಿತವಾಗಿ ರೈಲು ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ. ಮೃತರ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೆ.ಮೃತರ ಹಾಗೂ ಗಾಯಾಳುಗಳ ಕುಟುಂಬದ ಜೊತೆ ನಾವಿದ್ದೇವೆ ಎಂದಿದ್ದಾರೆ.

ಒಂದು ತಿಂಗಳ ಹಿಂದೆ, ಸೀಲ್ದಾ-ಅಗರ್ತಲಾ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು 11 ಜನರು ಪ್ರಾಣ ಕಳೆದುಕೊಂಡರು. ಅಪಘಾತ ಸಂಭವಿಸುವುದನ್ನೇ ಕೇಂದ್ರ ಸರ್ಕಾರ ಎದುರು ನೋಡುತ್ತಿದೆಯೇ ಹೊರತು, ಸಮಸ್ಯೆಯನ್ನು ಬಗೆಹರಿಸುವುದನ್ನು ನೋಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಪ್ರಧಾನಿ ಮೋದಿ ಮತ್ತು ಅವರ ಸಚಿವರು ಪ್ರಚಾರ ಗಿಟ್ಟಿಸಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ರೈಲ್ವೆ ಸಚಿವರು ಭಾರತೀಯ ರೈಲ್ವೇಯನ್ನು ಬಾಧಿಸಿರುವ ಬೃಹತ್ ಲೋಪಗಳಿಗೆ ನೇರ ಹೊಣೆ ಹೊರಬೇಕು. ಅಪಘಾತ ತಡೆ ವ್ಯವಸ್ಥೆಯಾಗಿರುವ ಕವಚ್ ಎಂಬ ಸುರಕ್ಷತಾ ಕ್ರಮಗಳನ್ನು ಅಪಘಾತಗಳನ್ನು ತಡೆಗಟ್ಟಲು ಭಾರತದಾದ್ಯಂತ ಎಲ್ಲಾ ಮಾರ್ಗಗಳಲ್ಲಿ ತ್ವರಿತವಾಗಿ ಸ್ಥಾಪಿಸಬೇಕು ಎಂಬುದು ನಮ್ಮ ಏಕೈಕ ಬೇಡಿಕೆ ಎಂದಿದ್ದಾರೆ.

ಎಕ್ಸ್​ಪ್ರೆಸ್​​ ರೈಲಿನ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಗೊಂಡಾ ಮತ್ತು ಜಿಲಾಹಿ ನಡುವೆ ಇರುವ ಪಿಕೌರಾ ಪ್ರದೇಶದಲ್ಲಿ ರೈಲು ಅವಘಡ ಸಂಭವಿಸಿದೆ.

ರೈಲು ಅವಘಡ ನಡೆದ ಸ್ಥಳಕ್ಕೆ ಪರಿಹಾರ ಕಾರ್ಯಾಚರಣೆಗಾಗಿ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಕೆಲವು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ಪ್ರಯಾಣಿಕರು ತಮ್ಮ ಸರಂಜಾಮುಗಳನ್ನು ಹಿಡಿದುಕೊಂಡು ಹಳಿಯ ಬದಿಗಳಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ. ರೈಲು ಸಂಖ್ಯೆ 15904 ಚಂಡೀಗಢದಿಂದ ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಅದರ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿವೆ.

ಇದನ್ನೂ ಓದಿ: Train Derail: ಹಳಿ ತಪ್ಪಿದ ರೈಲು; ಅಪಘಾತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?

Exit mobile version