Site icon Vistara News

Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ

Train movement resumes in Odisha

Train movement resumes in the affected section near Bahanaga railway Station

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆ ಬಹನಗ ರೈಲು ನಿಲ್ದಾಣದ ಬಳಿ ತ್ರಿವಳಿ ರೈಲು ಅಪಘಾತ ಸಂಭವಿಸಿ 288 ಜನ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಎರಡು ದಿನದಿಂದ ಅಪಘಾತ ನಡೆದ ಸ್ಥಳವು ಮಸಣದಂತಾಗಿತ್ತು. ಹೆಣಗಳ ರಾಶಿ ಬಿದ್ದಿದ್ದವು. ರೈಲು ಹಳಿಗಳ ಮೇಲೆ ಬೋಗಿಗಳು ಬಿದ್ದ ಚಿತ್ರ ಭಯ ಹುಟ್ಟಿಸುವಂತಿದ್ದವು. ಆದರೆ, ಅಪಘಾತ ನಡೆದು 51 ಗಂಟೆಯಲ್ಲಿಯೇ ಚಿತ್ರಣ ಬದಲಾಗಿದ್ದು, ರೈಲು ಸಂಚಾರ ಆರಂಭವಾಗದೆ.

ಹೌದು, ಅಪಘಾತ ನಡೆದ ಸ್ಥಳದಿಂದ ಶವಗಳನ್ನು ತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದಾದ ಬಳಿಕ ಜೆಸಿಬಿಗಳ ಮೂಲಕ ಬಿದ್ದ ಬೋಗಿಗಳನ್ನು ತೆರವುಗೊಳಿಸಿದ್ದು, ಸಾವಿರಾರು ಸಿಬ್ಬಂದಿಯು ಅಪಘಾತ ನಡೆದು 51 ಗಂಟೆಯಲ್ಲಿಯೇ ಎಲ್ಲ ಹಳಿಗಳನ್ನು ಜೋಡಿಸಿ, ಮತ್ತೆ ರೈಲುಗಳು ಸಂಚಾರ ಮಾಡಲು ಅನುಕೂಲ ಮಾಡಿದ್ದಾರೆ. ಈಗ ಅಪಘಾತ ನಡೆದ ಸ್ಥಳದಲ್ಲಿ ರೈಲುಗಳ ಓಡಾಟ ಆರಂಭವಾಗಿದೆ.

ಇದನ್ನೂ ಓದಿ: Odisha Train Accident : ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ

36 ಗಂಟೆ ಸ್ಥಳದಲ್ಲೇ ಇದ್ದ ಅಶ್ವಿನಿ ವೈಷ್ಣವ್‌

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಅಪಘಾತ ನಡೆದ ಬಳಿಕದ 51 ಗಂಟೆಯಲ್ಲಿ 36 ಗಂಟೆ ಅಪಘಾತ ನಡೆದ ಸ್ಥಳದಲ್ಲಿಯೇ ಇದ್ದು ಜನರ ರಕ್ಷಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದಾರೆ. ಹಾಗೆಯೇ, ರಕ್ಷಣಾ ಕಾರ್ಯಾಚರಣೆ ಬಳಿಕವೂ ಅದೇ ಸ್ಥಳದಲ್ಲಿದ್ದು, ಮತ್ತೆ ರೈಲುಗಳ ಸಂಚಾರಕ್ಕೆ ಮಾಡಬೇಕಾದ ವ್ಯವಸ್ಥೆ ಮಾಡಿದ್ದಾರೆ. ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಹಳಿಗಳ ದುರಸ್ತಿಯಾಗಿ, ಮತ್ತೆ ರೈಲು ಸಂಚರಿಸಿದ ಬಳಿಕವೇ ಅವರು ಅಲ್ಲಿಂದ ನಿರ್ಗಮಿಸಿದ್ದಾರೆ. ರೈಲು ಸಂಚಾರ ಆರಂಭವಾದ ಬಳಿಕ ಲೋಕೋ ಪೈಲಟ್‌ಗೆ ಕೈ ಬೀಸುವ ಜತೆಗೆ, ರೈಲಿಗೆ ಕೈಮುಗಿದಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಇನ್ನು ಭೀಕರ ಅಪಘಾತದಲ್ಲಿ ಸಿಲುಕಿರುವ ಪ್ಯಾಸೆಂಜರ್ ರೈಲುಗಳಲ್ಲಿ ಪ್ರಯಾಣಿಸಿದ್ದ ಟಿಕೆಟ್ ರಹಿತ ಪ್ರಯಾಣಿಕರಿಗೂ ಪರಿಹಾರ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. “ಪ್ರಯಾಣಿಕರು ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ದರೂ ಅವರಿಗೆ ಪರಿಹಾರ ನೀಡಲಾಗುವುದು” ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ.

ಅದೇ ರೀತಿ ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸದಸ್ಯ ಜಯ ವರ್ಮಾ ಸಿನ್ಹಾ, ಆಸ್ಪತ್ರೆಗಳಲ್ಲಿ ದಾಖಲಾದ ಪ್ರತಿಯೊಬ್ಬ ಗಾಯಾಳುವಿಗೆ ತಮ್ಮ ಸಂಬಂಧಿಕರು ಅಥವಾ ಆಪ್ತರನ್ನು ಪತ್ತೆ ಹಚ್ಚುವುದಕ್ಕೆ ನೆರವಾಲು ಸ್ಕೌಟ್ ಅಥವಾ ಗೈಡ್ಸ್​​ ನೆರವು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ.

ಸಹಾಯವಾಣಿ ಸಂಖ್ಯೆ 139 ಲಭ್ಯವಿದೆ. ಈ ಸಂಪರ್ಕ ಸಂಖ್ಯೆ ಮೂಲಕ ಹಿರಿಯ ರೈಲ್ವೆ ಅಧಿಕಾರಿಗಳು ಕರೆಗಳಿಗೆ ಉತ್ತರಿಸುತ್ತಿದ್ದಾರೆ. ಸಾಧ್ಯವಾದಷ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರ್ಮಾ ಇದೇ ವೇಳೆ ಮಾಹಿತಿ ನೀಡಿದ್ದಾರೆ.

Exit mobile version