ನವ ದೆಹಲಿ: ಪಾಸ್ಪೋರ್ಟ್ನಲ್ಲಿ ನಿಮ್ಮ ಪೂರ್ಣ ಹೆಸರು ಇಲ್ಲದೆ ಇದ್ದರೆ ಇನ್ನು ಮುಂದೆ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್)ಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಯುಎಇ ದೇಶದ ವಿಮಾನಯಾನ ಆಡಳಿತ ತನ್ನ ವ್ಯಾಪಾರ ಪಾಲುದಾರನಾದ ಇಂಡಿಗೊಕ್ಕೆ ತಿಳಿಸಿದೆ. ಇದರ ಅರ್ಥವೇನೆಂದರೆ ಪಾಸ್ಪೋರ್ಟ್ನಲ್ಲಿ ನಿಮ್ಮ ಮೊದಲ ಹೆಸರು (First Name) ಮಧ್ಯದ ಹೆಸರು (Middle Name) ಮತ್ತು ಕೊನೇ ಹೆಸರು (Last Name) ಪೂರ್ಣವಾಗಿ ಇರಲೇಬೇಕು. ನಿಮ್ಮ ಮಧ್ಯದ ಹೆಸರು ಮಾತ್ರ ಇದ್ದರೆ ಅಂಥ ಪಾಸ್‌ಪೋರ್ಟ್‌ಗೆ ಯುಎಇಯಲ್ಲಿ ಮಾನ್ಯತೆ ಇರುವುದಿಲ್ಲ. ಯುಎಇಗೆ ವಿಮಾನಯಾನ ಮಾಡುವುದಾದರೆ ಮೊದಲ ಮತ್ತು ಕೊನೇ ಹೆಸರನ್ನೂ ಕಡ್ಡಾಯವಾಗಿ ಪಾಸ್ಪೋರ್ಟ್ನಲ್ಲಿ ಪ್ರಕಟಿಸಿರಲೇಬೇಕಾಗಿರುತ್ತದೆ. ಮೂರು ಪದದ ಹೆಸರನ್ನು ಹೊಂದಿರಲೇಬೇಕಾಗಿರುತ್ತದೆ.
ನವೆಂಬರ್ 21ರಿಂದಲೇ ಈ ನಿಯಮ ಜಾರಿಯಾಗಿದ್ದಾಗಿ ಯುಎಇ ಆಡಳಿತ ಇಂಡಿಗೊಕ್ಕೆ ನೀಡಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಆ ಸೂಚನೆಯನ್ನು ಇಂಡಿಗೊ ಎಲ್ಲ ಟ್ರಾವೆಲ್ ಏಜೆಂಟ್ ಸಂಸ್ಥೆಗಳಿಗೂ ತಿಳಿಸಿದೆ. ‘ಯುಎಇ ಆಡಳಿತದ ಸೂಚನೆಯಂತೆ ಭಾರತದ ಯಾವುದೇ ವಿಮಾನ ಪ್ರಯಾಣಿಕ, ಆತನ ಬಳಿ ಪ್ರವಾಸಿ ವೀಸಾ ಇರಲಿ ಅಥವಾ ಇನ್ಯಾವುದೇ ಮಾದರಿಯ ವೀಸಾವನ್ನೇ ಹೊಂದಿರಲಿ. ಪಾಸ್ಪೋರ್ಟ್ ಮೇಲೆ ಒಂದೇ ಹೆಸರಿದ್ದರೆ (ಮೊದಲ ಮತ್ತು ಕೊನೇ ಹೆಸರು ಇಲ್ಲದೆ ಇದ್ದರೆ) ಅವರಿಗೆ ಯುಎಇಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ. ಇನ್ನು ಯುಎಇದಲ್ಲಿ ಇರುವ ಭಾರತೀಯರಿಗೂ ಈ ನಿಯಮ ಅನ್ವಯ ಆಗಲಿದೆ. ಅವರಲ್ಲಿ ಯಾರಾದರೂ ಪಾಸ್ಪೋರ್ಟ್ನಲ್ಲಿ ಒಂದೇ ಹೆಸರು ಹೊಂದಿದವರು ಇದ್ದರೆ, ಅವರೂ ಭಾರತಕ್ಕೆ ವಾಪಸ್ ಪ್ರಯಾಣ ಮಾಡಲು ಆಗುವುದಿಲ್ಲ’ ಎಂಬ ಅಂಶಗಳನ್ನು ಈ ಸುತ್ತೋಲೆ ಒಳಗೊಂಡಿದೆ.
ಇನ್ನು ಭಾರತದ ಯಾವುದೇ ಪ್ರಯಾಣಿಕ ಯುಎಇಯಲ್ಲಿ ವಾಸ್ತವ್ಯ ಹೂಡಲು ಪರವಾನಗಿ ಮತ್ತು ಶಾಶ್ವತ/ಉದ್ಯೋಗದ ವೀಸಾ ಪಡೆದಿದ್ದು, ಪಾಸ್ಪೋರ್ಟ್ನಲ್ಲಿ ಒಂದೇ ಹೆಸರನ್ನು ಹೊಂದಿದ್ದರೆ, ಅಂಥವರು ತಮ್ಮ ಪಾಸ್ಪೋರ್ಟ್ ನವೀಕರಿಸಿಕೊಳ್ಳಬೇಕು. ಅವರು ಬೇಕಿದ್ದರೆ ತಮ್ಮ ಮಧ್ಯದ ಹೆಸರನ್ನೇ ಮೊದಲ ಹೆಸರು ಮತ್ತು ಸರ್ನೇಮ್ (ಕೊನೇ ಹೆಸರು) ಜಾಗದಲ್ಲೂ ನಮೂದಿಸಿಕೊಳ್ಳಬಹುದು ಎಂದು ಯುಎಇ ಆಡಳಿತ ತಿಳಿಸಿದ್ದಾಗಿ ಇಂಡಿಗೊ ಮಾಹಿತಿ ನೀಡಿದೆ. ಸಮಗ್ರ ವಿವರಗಳಿಗಾಗಿ ಇಂಡಿಗೊ ವೆಬ್ಸೈಟ್ಗೆ ಭೇಟಿ ಕೊಡಬಹುದಾಗಿದೆ.
ಇದನ್ನೂ ಓದಿ: Ashay Kumar | ನಾನು ಭಾರತೀಯ, ಶೀಘ್ರವೇ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವೆ, ಕೊನೆಗೂ ನಟ ಅಕ್ಷಯ್ ಕುಮಾರ್ ಸ್ಪಷ್ಟನೆ