Site icon Vistara News

Delhi Earthquake: ಚೀನಾದಲ್ಲಿ ಪ್ರಬಲ ಭೂಕಂಪ; ದೆಹಲಿಯಲ್ಲೂ ಕಂಪನ, ಹೆಚ್ಚಿದ ಜನಾತಂಕ

Earthquake

Back-to-back earthquakes strike Maharashtra's Hingoli district within 10 minutes

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ (NCR) ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ಸೋಮವಾರ (ಜನವರಿ 22) ತಡರಾತ್ರಿ ಕಿರ್ಗಿಜ್‌ಸ್ತಾನ್‌ ಹಾಗೂ ಚೀನಾದ ಕ್ಸಿನ್‌ಜಿಯಾಂಗ್‌ ಗಡಿಯಲ್ಲಿ (Kyrgyzstan-Xinjiang Border) 7.2 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ ಕಾರಣ ದೆಹಲಿ ಹಾಗೂ ಎನ್‌ಸಿಆರ್‌ ವ್ಯಾಪ್ತಿಯ (Delhi Earthquake) ಹಲವೆಡೆ ಭೂಮಿ ಕಂಪಿಸಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಜನ ಮನೆಯಿಂದ ಹೊರಗೆ ಓಡಿಬಂದರು. ಕೆಲ ಕಾಲ ಅವರಲ್ಲಿ ಆತಂಕ ಮನೆಮಾಡಿತ್ತು ಎಂದು ತಿಳಿದುಬಂದಿದೆ.

ಭೂಕಂಪದಿಂದಾಗಿ ಯಾರಿಗೂ ಅಪಾಯವಾಗಿಲ್ಲ. ಕಟ್ಟಡಗಳೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಜನವರಿಯಲ್ಲಿಯೇ ದೆಹಲಿ ಸುತ್ತಮುತ್ತ ಸಂಭವಿಸುತ್ತಿರುವ ಎರಡನೇ ಭೂಕಂಪ ಇದಾಗಿದೆ. ಜನವರಿ 11ರಂದು ಕೂಡ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿತ್ತು. ಅಫಘಾನಿಸ್ತಾನದ ಹಿಂದು ಕುಶ್‌ನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದ ಕಾರಣ ದೆಹಲಿಯಲ್ಲೂ ಕಂಪನದ ಅನುಭವವಾಗಿತ್ತು. ಈಗ ಕಿರ್ಗಿಜ್‌ಸ್ತಾನ್‌-ಕ್ಸಿನ್‌ಜಿಯಾಂಗ್‌ ಗಡಿಯಲ್ಲಿ ಭೂಕಂಪ ಸಂಭವಿಸಿದ ಕಾರಣ ಕಂಪನದ ಅನುಭವವಾಗಿದೆ.

ಕಿರ್ಗಿಜ್‌ಸ್ತಾನ್‌-ಕ್ಸಿನ್‌ಜಿಯಾಂಗ್‌ ಗಡಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿಯೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಕೆಲ ಕಟ್ಟಡಗಳು ಕುಸಿದಿರುವುದು ಬಿಟ್ಟರೆ ಯಾರಿಗೂ ತೊಂದರೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಚೀನಾದಲ್ಲಿ ಕೆಲ ದಿನಗಳ ಹಿಂದಷ್ಟೇ ಸಂಭವಿಸಿದ್ದ ಭೂಕಂಪದಲ್ಲಿ 100ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಜಪಾನ್‌ನಲ್ಲೂ ಹೊಸ ವರ್ಷದ ದಿನವೇ ಭೂಕಂಪ ಸಂಭವಿಸಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಇದರ ಬೆನ್ನಲ್ಲೇ ಚೀನಾಗೆ ಮತ್ತೊಂದು ಭೂಕಂಪದ ಹೊಡೆತ ಬಿದ್ದಿದೆ.

ಇದನ್ನೂ ಓದಿ: Japan earthquake: ಜಪಾನ್‌ ಭೂಕಂಪದಲ್ಲಿ ಸತ್ತವರ ಸಂಖ್ಯೆ 73ಕ್ಕೆ ಏರಿಕೆ, ಅವಶೇಷಗಳಡಿ ಹುಡುಕಾಟ

ನೇಪಾಳದಲ್ಲೂ ಕಳೆದ ವರ್ಷ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version