ನವದೆಹಲಿ: ರಾಷ್ಟ್ರೀಯ ಏಕತಾ ದಿವಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಕ್ಟೋಬರ್ 31ರಂದು ಗುಜರಾತ್‌ನ ಕೆವಾಡಿಯಾಗೆ ತೆರಳಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಮೋದಿ ಅವರ ಎದುರು ಬನಸ್ಕಾಂತ ಜಿಲ್ಲೆ ಅಂಬಾಜಿ ಪಟ್ಟಣದ ಬುಡಕಟ್ಟು ಸಮುದಾಯದ ಮಕ್ಕಳ ತಂಡವು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.
ಬುಡಕಟ್ಟು ಮಕ್ಕಳ ಸಂಗೀತ ತಂಡವು ಪ್ರಧಾನಿಗಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. 2022ರ ಸೆಪ್ಟೆಂಬರ್ 30ರಂದು ಮೋದಿ ಅವರು ಗುಜರಾತ್‌ನ ಅಂಬಾಜಿಗೆ ಭೇಟಿ ನೀಡಿದಾಗ ಮತ್ತು 7,200 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಿದಾಗ ಸಾರ್ವಜನಿಕ ಸಮಾರಂಭಕ್ಕೆ ಪ್ರಧಾನಿಯನ್ನು ಸ್ವಾಗತಿಸಲು ಈ ತಂಡವು ಪ್ರದರ್ಶನ ನೀಡಿತ್ತು. ತಂಡದ ಸಂಗೀತ ಕಾರ್ಯಕ್ರಮಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಕೆವಾಡಿಯಾಗೂ ಆಹ್ವಾನಿಸಿದ್ದರು. ಅದರಂತೆ, ಮಕ್ಕಳ ತಂಡವು ಅ.31ರ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದೆ.
ಭಿಕ್ಷೆ ಬೇಡುತ್ತಿದ್ದ ಮಕ್ಕಳು
ಒಂದು ಕಾಲದಲ್ಲಿ ಅಂಬಾಜಿ ದೇವಾಲಯದಲ್ಲಿ ಭಿಕ್ಷೆ ಬೇಡುತ್ತಿದ್ದ ಮಕ್ಕಳು ಈಗ ಮೋದಿ ಪ್ರೋತ್ಸಾಹದ ಬಳಿಕ ಕೆವಾಡಿಯಾದಲ್ಲಿ ಪ್ರದರ್ಶನ ನೀಡಲಿದ್ದಾರೆ. ಮಕ್ಕಳು ಅಂಬಾಜಿ ದೇವಾಲಯದ ಬಳಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲಿ ಅವರು ಸಂದರ್ಶಕರ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅಂಬಾಜಿಯಲ್ಲಿರುವ ಶ್ರೀ ಶಕ್ತಿ ಸೇವಾ ಕೇಂದ್ರ ಎಂಬ ಸ್ಥಳೀಯ ಎನ್‌ಜಿಒ ಈ ಮಕ್ಕಳಿಗಾಗಿ ಕೆಲಸ ಮಾಡಿತು. ಅವರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರಲ್ಲಿರುವ ಉತ್ತಮ ಕೌಶಲ್ಯಗಳನ್ನು ಗುರುತಿಸಲು ಸಹ ನೆರವು ನೀಡಿತು. ಸಂಗೀತ ತಂಡದ ಬುಡಕಟ್ಟು ಮಕ್ಕಳಿಗೆ ಶ್ರೀ ಶಕ್ತಿ ಸೇವಾ ಕೇಂದ್ರ ಎನ್‌ಜಿಒ ಕೌಶಲವನ್ನು ಸಹ ಒದಗಿಸಿದೆ.
ಅಕ್ಟೋಬರ್ 31ರಂದು ಮೋದಿ ಅವರು ಕೆವಾಡಿಯಾಕ್ಕೆ ಭೇಟಿ ನೀಡಲಿದ್ದು, ಸರ್ದಾರ್ ಪಟೇಲರ 147ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ಅವರು ʻಏಕತಾ ದಿವಸ್ ಪರೇಡ್ʼನಲ್ಲಿ ಭಾಗವಹಿಸಲಿದ್ದಾರೆ ಮತ್ತು ʻಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿʼಯಲ್ಲಿ ಫೌಂಡೇಷನ್ ಕೋರ್ಸ್ ತರಬೇತಿ ಪಡೆಯುತ್ತಿರುವ ವಿವಿಧ ನಾಗರಿಕ ಸೇವೆಗಳಿಗೆ ಸೇರಿದ ಅಧಿಕಾರಿ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ | Narendra Modi | ನರೇಂದ್ರ ಮೋದಿ ಅಪ್ರತಿಮ ದೇಶಭಕ್ತ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣನೆ