ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಎಲ್ಲರ ನಿರೀಕ್ಷೆ ಹುಸಿ ಮಾಡಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ(BJP)ವು, ತ್ರಿಪುರಾದಲ್ಲಿ ಸರಳ ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿದೆ(Tripura Election Result). ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16ರಂದು ಮತದಾನ ನಡೆದಿತ್ತು. ಮಾರ್ಚ್ 2, ಗುರುವಾರ ರಿಸಲ್ಟ್ ಪ್ರಕಟವಾಗಿದ್ದು, ಬಿಜೆಪಿಯ 33 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೆ, ಈ ಬಾರಿಯ ಚುನಾವಣೆಯು ಬಿಜೆಪಿಗೆ ಅಷ್ಟು ಸುಲಭವಾಗಿರಲಿಲ್ಲ. ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಕೂಟ(Left parties and Congress) ಹಾಗೂ ತಿಪ್ರಾ ಮೋಥಾ ಪಕ್ಷ(Tipra Motha party)ಗಳಿಂದ ತೀವ್ರ ಪ್ರತಿಸ್ಪರ್ಧೆಯನ್ನು ಎದುರಿಸಬೇಕಾಯಿತು.
ಎಕ್ಸಿಟ್ ಪೋಲ್‌ಗಳು ಕೂಡ ತ್ರಿಪುರಾದಲ್ಲಿ ಹಂಗ್ ಅಸೆಂಬ್ಲಿಯನ್ನು ಊಹಿಸಿದ್ದವು ಮತ್ತು ತಿಪ್ರಾ ಮೋಥಾದ ನಾಯಕ, ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮ್ ಅವರು ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಫಲಿತಾಂಶವು ಮಾತ್ರ ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ತ್ರಿಪುರಾ ವಿಧಾನಸಭೆ ಬಲ 60. ಸರಳ ಬಹುಮತಕ್ಕೆ 31 ಸೀಟು ಗೆಲ್ಲಬೇಕು. ಬಿಜೆಪಿ, 33 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರವನ್ನು ತನ್ನಲ್ಲೇ ಉಳಿಸಿದೆ ಕೊಂಡಿದೆ.
ದಶಕಗಳ ಎಡಪಕ್ಷಗಳ ಆಡಳಿತಕ್ಕೆ ಕೊನೆ ಹಾಡಿ, 2018ರಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ತ್ರಿಪುರಾದಲ್ಲಿ ಇತಿಹಾಸ ಸೃಷ್ಟಿಸಿತ್ತು. ಈಶಾನ್ಯ ಭಾರತದ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ತ್ರಿಪುರಾ ಗೆಲ್ಲುವ ಮೂಲಕ, ತಾನು ಎಲ್ಲಡೆಯೂ ಸಲ್ಲುವ ಪಕ್ಷ ಎಂಬುದನ್ನು ಸಾಬೀತು ಪಡಿಸಿತ್ತು. ಈಗ ಮತ್ತೆ, 2023ರಲ್ಲಿ ಅದೇ ಕೆಲಸವನ್ನು ಮತ್ತೆ ರಿಪೀಟ್ ಮಾಡಿದೆ.
ಯಾರಿಗೆ ಎಷ್ಟು ಸೀಟು?
2023ರ ಸಾಲಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು 33, ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಕೂಟ 14, ತಿಪ್ರಾ ಮೋಥಾ 13 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. 2018 ಚುನಾವಣೆಗೆ ಹೋಲಿಸಿದರೆ, ಬಿಜೆಪಿ ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ. ಇದೇ ವೇಳೆ, ಎಡ ಪಕ್ಷಗಳಿಗೂ 2 ಸ್ಥಾನಗಳು ಮೈನಸ್ ಆಗಿವೆ. ಬಿಜೆಪಿ ಮತ್ತು ಎಡಪಕ್ಷಗಳು ಕಳೆದುಕೊಂಡ ಸ್ಥಾನಗಳು ತಿಪ್ರಾ ಪಾಲಾಗಿವೆ.
ಮತ ಪ್ರಮಾಣ: ಬಿಜೆಪಿ ಶೇ. 41.2 ಮತಗಳನ್ನು ಪಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.9.79 ಮತ ಕಡಿಮೆಯಾಗಿದೆ. ಇದೇ ವೇಳೆ, ಕಾಂಗ್ರೆಸ್- ಲೆಫ್ಟ್ ಪಾರ್ಟಿ ಕೂಡ ಶೇ.9.84 ಮತ ಕಡಿಮೆಯಾಗಿದ್ದು, ಒಟ್ಟು 36.3 ಪಡೆದುಕೊಂಡಿದೆ.
2018ರ ಫಲಿತಾಂಶ: ಬಿಜೆಪಿ 36, ಸಿಪಿಎಂ 16 ಮತ್ತು ಐಪಿಎಫ್‌ಟಿ 8 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಕಿಂಗ್ ಮೇಕರ್ ಆಗಲಿಲ್ಲ ಮೋಥಾ
2023ರ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ತಿಪ್ರಾ ಮೋಥಾ ಪಾರ್ಟಿ(ತಿಪ್ರಾಹ ಇಂಡಿಜಿನೀಯಸ್ ಪ್ರೊಗ್ರೆಸಿವ್ ರಿಜೀನಲ್ ಅಲೈನ್ಸ್). ರಾಜಮನೆತನದ ಪ್ರದ್ಯೋತ್ ಮಾಣಿಕ್ಯ ದೇಬ್ ಬರ್ಮ್ ಅವರು ಈ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಚುನಾವಣಾ ಪೂರ್ವ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ಬುಡುಕಟ್ಟು ಪಕ್ಷಗಳನ್ನು ಒಗ್ಗೂಡಿಸಿ ತಿಪ್ರಾ ಪಾರ್ಟಿಯ ಮೂಲಕ ಪ್ರದ್ಯೋತ್ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದ್ದರು.
ತ್ರಿಪುರಾದ ಸುಮಾರು 20ರಿಂದ 25 ಕ್ಷೇತ್ರಗಳಲ್ಲಿ ಬುಡಕಟ್ಟು ಜನಾಂಗದ ಮತಗಳು ನಿರ್ಣಾಯಕವಾಗಿದ್ದವು. ಹಿನ್ನೆಲೆಯಲ್ಲಿ ತಿಪ್ರಾ ಮೋಥಾ ಪಾರ್ಟಿ ಬಿಜೆಪಿಗೆ ಭಾರೀ ಹೊಡೆತವನ್ನು ನೀಡಲಿದ್ದು, ಹಂಗ್ ಅಸೆಂಬ್ಲಿಯನ್ನು ಬಹುತೇಕರು ನಿರೀಕ್ಷಿಸಿದ್ದರು. ಹಂಗ್ ಅಸೆಂಬ್ಲಿ ಸೃಷ್ಟಿಯಾಗದಿದ್ದರೂ, ಕಾಂಗ್ರೆಸ್‌ನ ಮಾಜಿ ನಾಯಕರೂ ಆಗಿರುವ ಪ್ರದ್ಯೋತ್ ತಮ್ಮ ಶಕ್ತಿಯನ್ನು ಈ ಎಲೆಕ್ಷನ್‌ನಲ್ಲಿ ಪ್ರದರ್ಶಿಸಿದ್ದಾರೆ. ಒಟ್ಟು 13 ಕ್ಷೇತ್ರಗಳನ್ನು ಗೆದ್ದುಕೊಂಡು, ಬಿಜೆಪಿಯ ಹಿಂದಿನ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಈ ಬಾರಿ ಕಡಿಮೆ ಮಾಡಲು ಯಶಸ್ವಿಯಾಗಿದೆ.
ಐಪಿಎಫ್‌ಟಿ ವಾಶೌಟ್
ಬಿಜೆಪಿ ನೇತೃತ್ವದ ಮೈತ್ರಿಕೂಟದ ಲೆಕ್ಕಾಚಾರವು 10ಕ್ಕೂ ಹೆಚ್ಚು ಸ್ಥಾನಗಳಿಂತಲೂ ಕುಸಿದಿದ್ದರೆ, ಪಕ್ಷದ ಸ್ಥಾನಗಳ ಸಂಖ್ಯೆ 36ರಿಂದ 33ಕ್ಕೆ ಇಳಿಕೆಯಾಗಿದೆ. ಈ ಚುನಾವಣೆಯಲ್ಲಿ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ(ಐಪಿಎಫ್‌ಟಿ) ಸೋಲು ಕಂಡಿದೆ. 2018ರಲ್ಲಿ 8 ಸ್ಥಾನ ಗೆದ್ದಿದ್ದ ಐಪಿಎಫ್‌ಟಿ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದಿದೆ.
ಎಡಪಕ್ಷಗಳು, ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆ
2023ರ ಚುನಾವಣೆಯಲ್ಲಿ ಹೇಗಾದರೂ ಗೆದ್ದೇ ಗೆಲ್ಲಬೇಕೆಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕೆ ಧುಮುಕಿದ್ದವು. ಆದರೆ, ಅವರ ಈ ಪ್ರಯತ್ನಕ್ಕೆ ಮತದಾರ ಸೊಪ್ಪು ಹಾಕಿಲ್ಲ. ಇನ್‌ಫ್ಯಾಕ್ಟ್ ಕಳೆದ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಎರಡು ಸ್ಥಾನ ಕುಸಿತವಾಗಿದೆ. 14 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಮಾತ್ರ ಸಾಧ್ಯವಾಗಿದೆ.
ಇದನ್ನೂ ಓದಿ: Northeast Assembly Election Result: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾಗೆ ಗೆಲುವು; ಸಂಭ್ರಮಾಚರಣೆ ಶುರು
ಮಾಣಿಕ್ ಸಾಹಾ ಮತ್ತೆ ಸಿಎಂ
ಮಿಸ್ಟರ್ ಕ್ಲೀನ್ ಎಂದ ಖ್ಯಾತರಾಗಿರುವ ಹಾಲಿ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಸಾಹಾ ಅವರು ಬಾರ್ಡೋವಲಿ ಟೌನ್ ಕ್ಷೇತ್ರದಿಂದ ಸ್ಪರ್ಧಿಸಿ, 1,257 ಮತಗಳ ಅಂತರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಆಶೀಸ್ ಕುಮಾರ್ ವಿರುದ್ಧ ಗೆದ್ದಿದ್ದಾರೆ. 69 ವರ್ಷದ ಸಾಹಾ ಎರಡನೇ ಬಾರಿಗೆ ಸಿಎಂ ಆಗಲಿದ್ದಾರೆ.