ಅಗರ್ತಲ: ತ್ರಿಪುರ ವಿಧಾನಸಭೆಯ ಒಟ್ಟು ೬೦ ಕ್ಷೇತ್ರಗಳಿಗೆ ಗುರುವಾರ (ಫೆಬ್ರವರಿ ೧೬) ಮತದಾನ (Tripura Election 2023) ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಆಡಳಿತಾರೂಢ ಬಿಜೆಪಿ, ಮೈತ್ರಿಪಕ್ಷ ಐಪಿಎಫ್‌ಟಿ ಹಾಗೂ ಕಾಂಗ್ರೆಸ್ ಮತ್ತು ಸಿಪಿಎಂ ಮೈತ್ರಿಯ ಕದನವು ಕುತೂಹಲ ಕೆರಳಿಸಿದೆ. ಇದರ ಮಧ್ಯೆ, ಟಿಐಪಿಆರ್‌ಎ ಮೋಥಾ ಎಂಬ ಪ್ರಾದೇಶಿಕ ಪಕ್ಷವೂ ಪ್ರಬಲವಾಗಿದ್ದು, ತ್ರಿಕೋನ ಸ್ಪರ್ಧೆ ಇದೆ.
ಐಪಿಎಫ್‌ಟಿ ಜತೆಗೂಡಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಮಾಣಿಕ್ ಸಾಹಾ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈ ಕಾಂಗ್ರೆಸ್ ಹಾಗೂ ಸಿಪಿಐ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಸುಲಭವಲ್ಲ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ತ್ರಿಪುರ ವಿಧಾನಸಭೆ ಚುನಾವಣೆಯು ದೇಶಾದ್ಯಂತ ಹೆಚ್ಚಿನ ಗಮನ ಸೆಳೆದಿದೆ.
ಒಟ್ಟು ೬೦ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ೩೧ ಮ್ಯಾಜಿಕ್ ನಂಬರ್ ಆಗಿದೆ. ಬೆಳಗ್ಗೆ ೭ ಗಂಟೆಯಿಂದ ಮತದಾನ ಆರಂಭವಾಗಲಿದೆ. ಕಣದಲ್ಲಿ ೨೫೯ ಅಭ್ಯರ್ಥಿಗಳಿದ್ದು, ೩,೩೩೭ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ೨೮.೧೩ ಲಕ್ಷ ಮತದಾರರಿದ್ದಾರೆ. ಶಾಂತಿಯುತವಾಗಿ ಮತದಾನ ನಡೆಸಲು ೨೫ ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಚುನಾವಣೆ ಹೆಚ್ಚು ಮಹತ್ವದ್ದಾಗಿದೆ.
ಇದನ್ನೂ ಓದಿ: PM Modi Tripura Campaign: ಕೇರಳದಲ್ಲಿ ಕುಸ್ತಿ, ತ್ರಿಪುರದಲ್ಲಿ ದೋಸ್ತಿ; ಕಾಂಗ್ರೆಸ್, ಸಿಪಿಎಂಗೆ ಮೋದಿ ಮಾತಿನೇಟು