ನವದೆಹಲಿ: ಫೆಬ್ರವರಿ 16ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಸಕಲ ಸಿದ್ಧತೆಯನ್ನು ಚುನಾವಣಾ ಆಯೋಗವು ಮಾಡಿಕೊಂಡಿದೆ(Tripura Election 2023). ಈಶಾನ್ಯ ಭಾರತದ ಪ್ರಮುಖ ರಾಜ್ಯವಾಗಿರುವ ತ್ರಿಪುರಾದಲ್ಲಿ ಸದ್ಯ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ, ಈ ಚುನಾವಣೆಯಲ್ಲಿ ಅದು ಕಾಂಗ್ರೆಸ್-ಎಡಪಕ್ಷಗಳ ಮೈತ್ರಿಯಿಂದ ಭಾರೀ ಪ್ರತಿರೋಧ ಎದುರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ದಶಕಗಳ ಎಡ ಪಕ್ಷಗಳ ಆಡಳಿತವನ್ನು ಕೊನೆಗಾಣಿಸಿ ಬಿಜೆಪಿ ತ್ರಿಪುರಾದಲ್ಲಿ ಮೊದಲ ಬಾರಿಗೆ ಆಡಳಿತಕ್ಕೆ ಬಂದಿತ್ತು. ಇದೀಗ ಅಭಿವೃದ್ಧಿಯ ಹೆಸರಿನಲ್ಲಿ ಎರಡನೇ ಬಾರಿಗೆ ಮತವನ್ನು ಕೇಳುತ್ತಿದೆ. ಆದರೆ, ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಹಾಗೂ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ರಾಮ್ ನೇತೃತ್ವದ ತ್ರಿಪುರಾ ದೇಶಿ ಪ್ರಗತಿಪರ ಪ್ರಾದೇಶಿಕ ಒಕ್ಕೂಟ(ತಿಪ್ರಾ) ‘ಮೋಥಾ’ ಬಿಜೆಪಿಯ ಓಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನ ಮಾಜಿ ನಾಯಕರಾಗಿರುವ ದೆಬ್ರಾಮ್ ಅವರು ತ್ರಿಪುರಾದ ಮಾಜಿ ರಾಜಮನೆತನ ಕಿರಿಯ ಸದಸ್ಯರೂ ಹೌದು. ತ್ರಿಪುರಾದ ದೇಶಿ ಬುಡಕಟ್ಟು ಮತ್ತು ಜನರ ಮೇಲೆ ಭಾರೀ ಪ್ರಭಾವ ಹೊಂದಿದ್ದಾರೆ. ಹಾಗಾಗಿ, ಈ ಚುನಾವಣೆಯಲ್ಲಿ ಅವರು ಕಿಂಗ್ ಮೇಕರ್ ಆಗಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ತ್ರಿಪುರಾದಲ್ಲಿ ಸುಮಾರ 20ರಿಂದ 25 ಕ್ಷೇತ್ರಗಳಲ್ಲಿ ಬುಡಕಟ್ಟು ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ಇದನ್ನೂ ಓದಿ: BJP Meeting | ಜೆ ಪಿ ನಡ್ಡಾ ನೇತೃತ್ವದಲ್ಲಿ ಸಭೆ, 2024ರ ಲೋಕಸಭೆ ಎಲೆಕ್ಷನ್‌ಗೆ ಬಿಜೆಪಿ ಸಿದ್ಧತೆ
ಮತ್ತೊಂದೆಡೆ, ಕಾಂಗ್ರೆಸ್-ಎಡಪಕ್ಷಗಳು ಜತೆಗೂಡಿ ಈ ಚುನಾವಣೆ ಎದುರಿಸಲಿದ್ದು, ಬಿಜೆಪಿಯನ್ನು ಹೊಡೆದು ಹಾಕುವ ಎಲ್ಲ ಪ್ರಯತ್ನಗಳನ್ನು ಮಾಡತ್ತಿವೆ. ಇತ್ತ ಬಿಜೆಪಿ, ಪ್ರಧಾನಿ ಮೋದಿ ಅವರ ವರ್ಚಸ್ಸಿನ ಮೇಲೆ ನಂಬಿಕೆ ಹೊಂದಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಮತವನ್ನು ಕೇಳುತ್ತಿದೆ. ತ್ರಿಪುರಾ ಮತದಾರರು ಮತ್ತೊಮ್ಮೆ ಬಿಜೆಪಿಗೆ ಆಶೀರ್ವದಿಸುತ್ತಾರಾ, ಕಾದು ನೋಡಬೇಕು.