ಹೈದರಾಬಾದ್: ತೆಲಂಗಾಣದಲ್ಲಿ ಇಂದು-ನಾಳೆ ಬಿಜೆಪಿ ಕಾರ್ಯಕಾರಿಣಿ ದೊಡ್ಡ ಉತ್ಸವದ ರೂಪದಲ್ಲಿ ನಡೆಯಲಿದೆ. ಈಗಾಗಲೇ ನಗರದ ಬಹುತೇಕ ಮಾರ್ಗಗಳೆಲ್ಲ ಕೇಸರಿಮಯವಾಗಿ ಬಿಜೆಪಿ ಬಾವುಟಗಳು, ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾರ ಪೋಸ್ಟರ್‌ಗಳನ್ನು ಎಲ್ಲ ಕಡೆಗಳಲ್ಲಿ ಹಾಕಲಾಗಿದೆ. ತೆಲಂಗಾಣ ಕೇಸರಿಯಾಗಿದ್ದು ಸಹಜವಾಗಿಯೇ ಅಲ್ಲಿನ ಆಡಳಿತ ಪಕ್ಷ ಟಿಆರ್‌ಎಸ್‌ಗೆ ಉರಿಮುಟ್ಟಿಸಿದೆ. ಕೆ.ಚಂದ್ರಶೇಖರ್ ರಾವ್ ಸದಾ ಬಿಜೆಪಿ ವಿರುದ್ಧ ಕಿಡಿಕಾರುತ್ತಾರೆ. ಅಂಥದ್ದರಲ್ಲಿ ಅವರ ರಾಜ್ಯಕ್ಕೇ ಹೋಗಿ ಎರಡು ದಿನ ದೊಡ್ಡಮಟ್ಟದಲ್ಲಿ ಕಾರ್ಯಕಾರಿಣಿ ನಡೆಸಿದರೆ ಅವರಿಗೆ ಏನಾಗಬೇಡ. ನೋಡಿಕೊಂಡು ಸುಮ್ಮನೆ ಇರಲಾಗದೆ ಅವರು ಬಿಜೆಪಿಗೆ ಕೌಂಟರ್ ಕೊಡಲು ಸಜ್ಜಾಗಿದ್ದಾರೆ..ಕೇಸರಿ ಎದುರು ಗುಲಾಬಿಯನ್ನು ಹೈಲೆಟ್ ಮಾಡಿದ್ದಾರೆ !
ತೆಲಂಗಾಣದಲ್ಲಿ ಇಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಬೆಂಬಲಿಸಿ ದೊಡ್ಡ ಮಟ್ಟದ ರ‍್ಯಾಲಿ ನಡೆಯಲಿದೆ. ಅದನ್ನು ಆಯೋಜಿಸಿದ್ದು ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್. ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ್ರತಿಪಕ್ಷಗಳೆಲ್ಲ ಸಭೆ ನಡೆಸಿದಾಗ, ಕಾಂಗ್ರೆಸ್ ಇರುವಲ್ಲಿ ನಾವು ಇರುವುದಿಲ್ಲ ಎಂದು ಹೇಳಿ ಸಭೆಗೆ ಹಾಜರಾಗದೆ ಅಂತರ ಕಾಯ್ದುಕೊಂಡಿದ್ದ ಟಿಆರ್‌ಎಸ್, ನಂತರ ಯಶವಂತ್ ಸಿನ್ಹಾಗೆ ಬೆಂಬಲ ಕೊಟ್ಟಿದ್ದಲ್ಲದೆ ಇವತ್ತು ಬಿಜೆಪಿಗೆ ಕೌಂಟರ್ ಕೊಡಲೂ ಅವರನ್ನು ಬಳಸಿಕೊಳ್ಳುತ್ತಿದೆ.
ಯಶವಂತ್ ಸಿನ್ಹಾ ಸದ್ಯ ರಾಯ್ಪುರದಲ್ಲಿದ್ದಾರೆ. ಇಂದು ಅವರು ಹೈದರಾಬಾದ್ ತಲುಪಲಿದ್ದಾರೆ. ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ. ಬೇಗಮ್‌ಪೇಟ್ ಏರ್‌ಪೋರ್ಟ್‌ಗೆ ಬಂದಿಳಿಯುವ ಅವರನ್ನು ಟಿಆರ್‌ಎಸ್‌ನ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸ್ವಾಗತಿಸುವರು. ಇವರಿಬ್ಬರೂ ಅದ್ದೂರಿ ರ‍್ಯಾಲಿಯಲ್ಲಿ ಜಲವಿಹಾರ್‌ಗೆ ತೆರಳುವರು. ಈ ವೇಳೆ ನಡೆಯಲಿರುವ ಜಾಥಾದಲ್ಲಿ ಸುಮಾರು 10 ಸಾವಿರ ಬೈಕ್‌ಗಳು ಇರಲಿವೆ. ಈಗಂತೂ ತೆಲಂಗಾಣದ ರಸ್ತೆಗಳಲ್ಲಿ ಒಂದೆಡೆಗೆ ಬಿಜೆಪಿ ನಾಯಕರ ಪೋಸ್ಟರ್‌ಗಳು, ಕೇಂದ್ರ ಸರ್ಕಾರದ ಸಾಧನೆಗಳನ್ನೊಳಗೊಂಡ ದೊಡ್ಡ ಬ್ಯಾನರ್‌ಗಳಿದ್ದರೆ, ಇನ್ನೊಂದೆಡೆ ಕೆಸಿಆರ್, ಯಶವಂತ್ ಸಿನ್ಹಾರ ಕಟೌಟ್‌ಗಳು ತುಂಬಿಹೋಗಿವೆ. ಕೇಸರಿ-ಗುಲಾಬಿ ಬಣ್ಣ ಸಮ್ಮಿಳಿತಗೊಂಡು, ಅಲ್ಲೇ ರಾಜಕೀಯ ಜಟಾಪಟಿ ಸ್ಪಷ್ಟವಾಗಿ ಕಾಣುತ್ತಿದೆ.
ಇದನ್ನೂ ಓದಿ: ದಕ್ಷಿಣ ರಾಜ್ಯಗಳ ಮೇಲೆ ಬಿಜೆಪಿ ಕಣ್ಣು, ನಾಳೆಯಿಂದ ಹೈದರಾಬಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ
ಜಲವಿಹಾರ್‌ನಲ್ಲಿ ಟಿಆರ್‌ಎಸ್‌ನ ಸಂಸದರು, ಶಾಸಕರನ್ನು ಯಶವಂತ್ ಸಿನ್ಹಾ ಸಭೆ ಭೇಟಿಯಾಗಲಿದ್ದಾರೆ. ನಂತರ ಬೃಹತ್ ಸಭೆ ನಡೆಯಲಿದೆ. ಇಲ್ಲಿ ಸಿನ್ಹಾ ಮತ್ತು ಕೆಸಿಆರ್ ಇಬ್ಬರೂ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಮಧ್ಯಾಹ್ನ 1ಗಂಟೆಗೆ ಯಶವಂತ್ ಸಿನ್ಹಾ ಮತ್ತು ಚಂದ್ರಶೇಖರ್ ರಾವ್ ಒಟ್ಟಾಗಿ ಊಟ ಮಾಡುವರು. ಈ ವೇಳೆ ಪಕ್ಷದ ಇತರ ಗಣ್ಯರೂ ಇರಲಿದ್ದಾರೆ. ನಂತರ ಯಶವಂತ್ ಸಿನ್ಹಾ ಹೈದರಾಬಾದ್‌ನಲ್ಲಿ ಎಐಎಂಐಎಂ ಮತ್ತು ಕಾಂಗ್ರೆಸ್ ನಾಯಕರನ್ನೂ ಭೇಟಿಯಾಗಿ, ಬೆಂಬಲ ಕೋರಲಿದ್ದಾರೆ.
ಇದನ್ನೂ ಓದಿ: ಬಿಜೆಪಿಯ 2 ದಿನಗಳ ಕಾರ್ಯಕಾರಿಣಿಯಲ್ಲಿ ಮೇಳೈಸಲಿದೆ ತೆಲಂಗಾಣ ಸಂಸ್ಕೃತಿ-ಪರಂಪರೆ