ಲಖನೌ: ಒಂದೊಂದು ಘಟನೆಗಳು ಹೇಗಿರುತ್ತವೆ ಎಂದರೆ, ಅಬ್ಬಾ ಎಂಬ ಉದ್ಘಾರವನ್ನು ನಮಗೆ ಅರಿವಿಲ್ಲದಂತೆ ನಮ್ಮ ಬಾಯಿಂದ ಹೊರಡಿಸುತ್ತವೆ. ಅದೇ ರೀತಿಯ ಒಂದು ಘಟನೆಯೀಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಫಿರೋಜಾಬಾದ್ ಜಿಲ್ಲೆಯ ಬರ್ತಾರಾ ಎಂಬ ಹಳ್ಳಿಯಲ್ಲಿ ಎಂಟು ತಿಂಗಳ ಗರ್ಭಿಣಿ ಮೇಲೆ ಟ್ರಕ್ ಹರಿದಿದೆ. ಈ ದುರಂತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಆದರೆ ಅದೇ ವೇಳೆ ಹೊಟ್ಟೆಯಲ್ಲಿದ್ದ ಮಗು ಜೀವಂತವಾಗಿ ಹೊರಬಂದಿದೆ. ಇದೊಂದು ಪವಾಡ ಎಂದು ಸ್ವತಃ ವೈದ್ಯರೇ ಹೇಳಿದ್ದಾರೆ. ಮಹಿಳೆ ಗರ್ಭಿಣಿಯಾದಾಗ ಸತ್ತು ಹೋದರೆ, ಅಥವಾ ಇಷ್ಟು ದೊಡ್ಡ ಮಟ್ಟದ ಅಪಘಾತ ನಡೆದರೆ, ಹೊಟ್ಟೆಯಲ್ಲಿರುವ ಮಗು ಬದುಕುಳಿಯುವುದು ತೀರ ಅಪರೂಪ. ಆದರೆ ಇಲ್ಲಿ ಹಾಗಾಗಿಲ್ಲ, ಮಹಿಳೆ ಉಸಿರು ನಿಲ್ಲಿಸಿಸುವ ಹೊತ್ತಿಗೆ ಸರಿಯಾಗಿ, ಗರ್ಭದಿಂದ ಮಗು ಅದರಷ್ಟಕ್ಕೇ ಹೊರಬಂದಿದೆ.
ಹೀಗೆ ಮೃತ ತಾಯಿಯ ಹೊಟ್ಟೆಯಿಂದ ಜೀವಂತವಾಗಿ ಹೊರಬಿದ್ದ ಶಿಶುವೀಗ ಆಸ್ಪತ್ರೆಯಲ್ಲಿದ್ದು, ಆರೋಗ್ಯವಾಗಿಯೇ ಇದೆ. ಕೆಲವು ಸಾಮಾನ್ಯ ಚಿಕಿತ್ಸೆಯನ್ನು ನೀಡಬೇಕಾಗಿದೆ ಎಂದು ನರ್ಖಿ ಪೊಲೀಸ್ ಠಾಣೆಯ ಅಧಿಕಾರಿ ಫತೇಹ್ ಬಹದ್ದೂರ್ ಸಿಂಗ್ ಬಧೋರಿಯಾ ತಿಳಿಸಿದ್ದಾರೆ. ಮೃತ ಗರ್ಭಿಣಿ ಆಗ್ರಾ ನಿವಾಸಿ ಕಾಮಿನಿ. ಆಕೆಗಿನ್ನೂ 26 ವರ್ಷ. ಗಂಡನೊಂದಿಗೆ ಬೈಕ್‌ನಲ್ಲಿ ತವರು ಮನೆಗೆ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರಿಗೆ ಬೈಕ್ ಡಿಕ್ಕಿಯಾಗದಂತೆ ತಪ್ಪಿಸಲು ಕಾಮಿನಿ ಪತಿ ರಾಮು ಪ್ರಯತ್ನ ಪಟ್ಟಿದ್ದಾರೆ. ಆದರೆ ನಿಯಂತ್ರಣ ತಪ್ಪಿದೆ. ಆಗ ಕಾಮಿನಿ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ರಸ್ತೆಯ ಬಿದ್ದ ಅವಳ ಮೇಲೆ ಹಿಂದಿನಿಂದ ಬಂದ ಲಾರಿಯೊಂದು ಹರಿದಿದೆ. ಆಗ ಮಗುವಿನ ಜನನವಾಗಿದೆ.
ಈ ಅಪಘಾತದಲ್ಲಿ ಮಹಿಳೆಯ ಪತಿ ಪಾರಾಗಿದ್ದು, ಅವರು ಟ್ರಕ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳ ಪರಿಶೀಲನೆ ಮಾಡುತ್ತಿದ್ದಾರೆ. ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ಮಹಿಳೆಯರಿಂದ ಕೆಸರಿನ ಮಜ್ಜನ! ಏನಿದು ವಿಚಿತ್ರ ಆಚರಣೆ?