ಮುಂಬೈ: ಹಿಂದಿ ಕಿರುತೆರೆ ನಟಿ, ಮಾಡೆಲ್ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ (Tunisha Sharma Death) ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ಸಹನಟ ಹಾಗೂ ಆಕೆಯ ಪ್ರಿಯತಮ ಶೀಜಾನ್ ಖಾನ್ ಅವರನ್ನು ಬೇರೆಲ್ಲ ಕೈದಿಗಳಂತೆಯೇ ನೋಡಿಕೊಳ್ಳಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಶೀಜಾನ್ ಅವರಿಗೆ ಕೂದಲು ಕಟ್ ಮಾಡದೆಯೇ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಜೈಲಿನ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Tunisha Sharma Death | ಸಿಸಿಟಿವಿಯಲ್ಲಿ ಸೆರೆಯಾಯ್ತು ತುನಿಶಾ- ಶೀಜಾನ್ ತೀವ್ರ ವಾಗ್ವಾದ: ಕೇಸ್ ಮತ್ತಷ್ಟು ಗಂಭೀರ!
ಶೀಜಾನ್ ಅವರು ಧಾರಾವಾಹಿಯಲ್ಲಿ ನಟಿಸುತ್ತಿರುವ ಹಿನ್ನೆಲೆ ಪಾತ್ರಕ್ಕೆ ತೊಂದರೆಯುಂಟಾಗಬಾರದು ಎನ್ನುವ ದೃಷ್ಟಿಯಿಂದಾಗಿ ಅವರ ಉದ್ದ ಕೂದಲನ್ನು ಕತ್ತರಿಸದೇ ಇರುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಕೀಲರು ವಸಾಯಿ ಸೆಷನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ವಿಚಾರವಾಗಿ ಜೈಲಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿತ್ತು. ಸೋಮವಾರ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, “ಜೈಲಿನ ನಿಯಮದ ಪ್ರಕಾರ ಸಿಖ್ ಧರ್ಮದ ಕೈದಿಗಳಿಗೆ ಮಾತ್ರ ಕೂದಲು ಉದ್ದ ಬಿಡುವುದಕ್ಕೆ ಅವಕಾಶವಿದೆ. ಹಿಂದೂ ಧರ್ಮದ ಕೈದಿಗಳಿಗೆ ಸಣ್ಣ ಜುಟ್ಟ(ಶಿಖೆ) ಹಾಗೂ ಮುಸ್ಲಿಂ ಧರ್ಮದ ಕೈದಿಗಳಿಗೆ ಗಡ್ಡ ಬಿಡುವುದಕ್ಕೆ ಅವಕಾಶವಿದೆ. ಸಿಖ್ ಹೊರತುಪಡಿಸಿ ಬೇರೆ ಧರ್ಮದ ಕೈದಿಗಳ ಕೂದಲು ಬಿಡುವುದರ ಬಗ್ಗೆ ಜೈಲಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹಾಗೆಯೇ ಶೀಜಾನ್ ಅವರ ಮಾನಸಿಕ ಆರೋಗ್ಯದ ತಪಾಸಣೆ ಆಗಬೇಕೆಂದು ಕೇಳಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಆರೋಪಿಯನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.
ತುನಿಶಾ(21) ಅವರು ಡಿ.24ರಂದು ಧಾರಾವಾಹಿಯ ಸೆಟ್ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಡಿ.25ರಂದು ಪೊಲೀಸರು ಶೀಜಾನ್ ಮೊಹಮದ್ ಖಾನ್ ಅವರನ್ನು ಬಂಧಿಸಿದ್ದರು. ಆರೋಪಿಯನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿದೆ. ಸದ್ಯ ಅವರನ್ನು ಥಾಣೆಯ ಕೇಂದ್ರೀಯ ಜೈಲಿನಲ್ಲಿ ಇರಿಸಿಕೊಳ್ಳಲಾಗಿದೆ.