ಹೈದರಾಬಾದ್ನ ರಾಜೇಂದ್ರ ನಗರದ ಅತ್ತಾಪುರ್ದಲ್ಲಿರುವ ಮುಷ್ಕ್ ಮಹಲ್ (ಹಳೇ ಕಾಲದ ಒಂದು ಕಟ್ಟಡ-Mushk Mahal) ಸದ್ಯ ಚರ್ಚೆಯ ವಿಷಯವಾಗಿದೆ. ಸುಮಾರು 300ವರ್ಷಗಳ ಹಿಂದೆ ಅಂದರೆ 1676ರಲ್ಲಿ ಕುತುಬ್ ಶಾಹಿ ರಾಜವಂಶದ ಕೊನೇ ರಾಜ ಅಬುಲ್ ಹಸನ್ ತಾನಾ ಷಾ ಆಳ್ವಿಕೆಯಲ್ಲಿ ಸೇನಾ ಕಮಾಂಡರ್ ಆಗಿದ್ದ ಮಲಿಕ್ ಮಿಯಾನ್ ಮಿಶ್ಕ್ ಎಂಬಾತ ಈ ಮಹಲ್ನ್ನು ನಿರ್ಮಿಸಿದ್ದ. ಈತ ಒಬ್ಬ ಸುಗಂಧ ದ್ರವ್ಯಗಳ ವ್ಯಾಪಾರಿಯಾಗಿದ್ದ. ಹೀಗಾಗಿ ಆಗ ಕಟ್ಟಡ ಸುಗಂಧದ ಅರಮನೆ ಎಂದೇ ಖ್ಯಾತಿಯಾಗಿತ್ತು. ಆದರೀಗ ದಾರಿಹೋಕರೆಲ್ಲ ಅಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ಪರಿಣಾಮ, ದುರ್ನಾತ ಬೀರುತ್ತಿರುವ ಕಟ್ಟಡವಾಗಿದೆ. ಕುತುಬ್ ಶಾಹಿ ಮಹಲ್ ಈಗ ಕಾಯಕಲ್ಪವಿಲ್ಲದ ಭೂತದ ಬಂಗಲೆಯಂತೆ ಆಗಿದೆ.
ಇದನ್ನೆಲ್ಲ ಬದಿಗೊತ್ತಿ ಈಗ ಇನ್ನೊಂದು ಮಹತ್ವದ ವಿಷಯ ಈ ಮಹಲ್ ವಿಚಾರದಲ್ಲಿ ಎದ್ದಿದೆ. ಮುಷ್ಕ್ ಮಹಲ್ನಲ್ಲಿ ನಿಧಿ ಇದೆ. ಅದನ್ನೊಂದು ಕಾಳಿಂಗ ಸರ್ಪ ಅಲ್ಲಿಯೇ ಇದ್ದು ರಕ್ಷಿಸುತ್ತಿದೆ ಎಂಬುದು ಈ ಸುದ್ದಿ. ಬುಧವಾರ ಒಂದಷ್ಟು ಯುವಕರು ಈ ಕಟ್ಟಡವನ್ನು ಪ್ರವೇಶಿಸಿದ್ದಾರೆ. ರೀಲ್ಸ್ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಕ್ಕೋಸ್ಕರ ಅವರು ಮಹಲ್ನ ಒಳಹೊಕ್ಕು, ಕುತೂಹಲದಿಂದ ಅಲ್ಲಿ-ಇಲ್ಲಿ ನೋಡುತ್ತಿದ್ದರು. ಈ ವೇಳೆ ಅವರಿಗೆ ಒಂದು ಗುಹೆಯಂಥ ಕಿಂಡಿ ಕಾಣಿಸಿದೆ. ಅದರಲ್ಲಿ ಅವರು ಪ್ರವೇಶಿಸಿದಾಗ ಸುರಂಗ ಮಾರ್ಗ ಪತ್ತೆಯಾಗಿದೆ. ಆದರೆ ಅವರಿಗೆ ಇನ್ನೊಂದು ಶಾಕ್ ಎದುರಾಗಿತ್ತು. ಅಲ್ಲೇ ಒಂದು 11 ಅಡಿ ಉದ್ದದ ಹಾವೊಂದು ಕಾಣಿಸಿತು. ಒಬ್ಬ ಹುಡುಗ ಸ್ಲ್ಯಾಬ್ನಂಥ ಕಲ್ಲಿನ ಮೇಲೆ ಕಾಲಿಡುತ್ತಿದ್ದಂತೆ ಆ ಹಾವು ಅಲ್ಲಿಂದ ಎದ್ದು ಬಂದು, ಮತ್ತೊಂದು ದಿಕ್ಕಿಗೆ ಹರಿದುಕೋಗಿದೆ. ಹುಡುಗರು ಸಿಕ್ಕಾಪಟೆ ಹೆದರಿಕೊಂಡು, ಒಂದೇ ಉಸಿರಿಗೆ ಓಡಿ ಹೊರಬಂದಿದ್ದಾರೆ. ಹುಡುಗ ಕಾಲಿಟ್ಟ ಕಲ್ಲಿನ ಕೆಳಗೇ ಈ ಗುಹೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:Human Sacrifice: ನರಬಲಿ ಮೌಢ್ಯಕ್ಕೆ ದಂಪತಿ ಬಲಿ; ಮನೆಯಲ್ಲಿ ರುಂಡ ಕತ್ತರಿಸಿಕೊಂಡು ಸಾವು
ಮಹಲ್ನಿಂದ ಹೊರಬಂದ ಹುಡುಗರು ಸ್ಥಳೀಯರಿಗೆ ತಾವು ಕಂಡ ದೃಶ್ಯವನ್ನು ವಿವರಿಸಿದ್ದಾರೆ. ಅದಾದ ಮೇಲೆ ಕಟ್ಟಡದಲ್ಲೊಂದು ಸುರಂಗವಿದೆ, ಅಲ್ಲಿ ನಿಧಿಯಿದೆ ಮತ್ತು ಅದನ್ನು ರಕ್ಷಿಸಲು ಹಾವೊಂದು ಇದೆ ಎಂಬ ಗಾಳಿಸುದ್ದಿ ಹರಡುತ್ತಲೇ ಇದೆ. ಹುಡುಗರು ಹೇಳಿದ್ದನ್ನು ಕೇಳಿದ ಮೇಲೆ ಕೆಲವರು ಅಲ್ಲಿಗೆ ತೆರಳಿ, ತಾವೂ ಪರಿಶೀಲನೆ ಮಾಡಿದ್ದಾರೆ. ಕಟ್ಟಡವು ಪಾಳು ಬಿದ್ದಂತಾಗಿದೆ. ಅಲ್ಲಿ ಹಾವು ಸೇರಿ ಇನ್ನಿತರ ಹಲವು ವಿಷಜಂತುಗಳು ಇವೆ. ಪುರಾತತ್ವ ಇಲಾಖೆಯವರು ಕೂಡಲೇ ಕಟ್ಟಡವನ್ನು ಸಮೀಕ್ಷೆ ಮಾಡಬೇಕು. ಅಲ್ಲಿ ನಿಧಿ ಇದೆಯಾ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.