ಮುಂಬೈ: ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಮಹಾರಾಷ್ಟ್ರದ ವ್ಯಕ್ತಿಯೊಬ್ಬನ ವಿಷಯದಲ್ಲಿ ನಿಜ ಎಂಬಂತಾಗಿದೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮಾಲ್‌ಶಿರಸ್ ತಾಲೂಕಿನಲ್ಲಿ ಇಬ್ಬರು ಅವಳಿ ಸಹೋದರಿಯರು ಪರಸ್ಪರ ಒಪ್ಪಿ, ಒಬ್ಬನೇ ವ್ಯಕ್ತಿಯನ್ನು (Man Marries Twin Sisters) ಮದುವೆಯಾಗಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ರಿಂಕಿ ಹಾಗೂ ಪಿಂಕಿ ಎಂಬ ಅವಳಿ ಸಹೋದರಿಯರು ೩೬ ವರ್ಷದ ಅತುಲ್ ಎಂಬುವರನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ. ಇಬ್ಬರೂ ಯುವತಿಯರು ಐಟಿ ಎಂಜಿನಿಯರ್‌ಗಳಾಗಿದ್ದು, ಅತುಲ್ ಟ್ರಾವೆಲ್ ಏಜೆನ್ಸಿ ಉದ್ಯಮಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮದುವೆಗೆ ಎರಡೂ ಮನೆಯ ಕುಟುಂಬಸ್ಥರು ಕೂಡ ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಒಬ್ಬನನ್ನೇ ಮದುವೆಯಾಗಿದ್ದು ಏಕೆ?
ರಿಂಕಿ ಹಾಗೂ ಪಿಂಕಿಯ ತಂದೆ ತೀರಿಕೊಂಡಿದ್ದು, ತಾಯಿ ಜತೆಗೆ ವಾಸಿಸುತ್ತಿದ್ದರು. ಅವಳಿ ಸಹೋದರಿಯರ ತಾಯಿ ಅನಾರೋಗ್ಯಕ್ಕೀಡಾದ ಕಾರಣ ಅವರನ್ನು ಪದೇಪದೆ ಆಸ್ಪತ್ರೆಗೆ ಸಾಗಿಸಬೇಕಿತ್ತು. ಇದೇ ವೇಳೆ, ಸಹೋದರಿಯರಿಗೆ ಅತುಲ್ ಪರಿಚಯವಾಗಿದ್ದಾನೆ. ಇವರ ತಾಯಿಯನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ಚಿಕಿತ್ಸೆ ಕೊಡಿಸುವುದು ಸೇರಿ ಹಲವು ರೀತಿ ನೆರವಾಗಿದ್ದಾನೆ. ಹೀಗೆ ನೆರವಾದ ವ್ಯಕ್ತಿಯನ್ನು ಇಬ್ಬರು ಸಹೋದರಿಯರೂ ಇಷ್ಟಪಟ್ಟಿದ್ದಾರೆ. ಕೊನೆಗೆ, ಇಬ್ಬರನ್ನೂ ಮದುವೆಯಾಗಲು ಅತುಲ್ ಒಪ್ಪಿಗೆ ಸೂಚಿಸಿದ್ದಾರೆ.
ಅತುಲ್ ವಿರುದ್ಧ ಕೇಸ್
ಯುವತಿಯರು ಹಾಗೂ ಅವರ ಕುಟುಂಬಸ್ಥರ ಒಪ್ಪಿಗೆ ಪಡೆದೇ ಮದುವೆಯಾದರೂ ಅತುಲ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಹಿಂದು ವಿವಾಹ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿಯು ಇಬ್ಬರನ್ನು ಮದುವೆಯಾಗುವುದು ಕಾನೂನುಬಾಹಿರವಾದ ಕಾರಣ ಪ್ರಕರಣ ದಾಖಲಿಸಲಾಗಿದೆ. ಹಾಗಾಗಿ, ಅತುಲ್ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ವಿವಾದಾತ್ಮಕ ಮದುವೆ ಎಂದೂ ಜನ ಕರೆಯುತ್ತಿದ್ದಾರೆ. ಇನ್ನೂ ಒಂದಷ್ಟು ಜನ ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ | ಗಂಡನ ಎರಡನೇ ಮದುವೆ; ವಿಚಾರಿಸುತ್ತೇನೆ ಎಂದ ಧರ್ಮಪತ್ನಿ ವೀಣಾ ಕಾಶಪ್ಪನವರ್