ನವ ದೆಹಲಿ: ನೋಯ್ಡಾದ ಅಕ್ರಮ ಟ್ವಿನ್ ಟವರ್ಸ್ (Twin Towers Demolition) ಭಾನುವಾರ ಮಧ್ಯಾಹ್ನ ಧರೆಗುರುಳುತ್ತಿದ್ದಂತೆ ಆ ಜಾಗದಲ್ಲಿ ಅವಶೇಷಗಳ ಪರ್ವತವೇ ನಿರ್ಮಾಣವಾಗಿದೆ! ಜತೆಗೆ, ಸ್ವಲ್ಪದರಲ್ಲೇ ಅನಾಹುತವೊಂದು ತಪ್ಪಿದೆ. 100 ಮೀಟರ್ ಎತ್ತರದ ಈ ಕಟ್ಟಡವನ್ನು ನಿಯಮಗಳನ್ನು ಮೀರಿ ಕಟ್ಟಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ಕಟ್ಟಡವನ್ನು ನೆಲಸಮ ಮಾಡಲು ಆದೇಶಿಸಿತ್ತು. ನಿಯಂತ್ರಿತ ಸ್ಫೋಟಕವನ್ನು ಬಳಸಿ, 9 ಸೆಕೆಂಡ್‌ನಲ್ಲಿ ಎರಡೂ ಟವರ್‌ಗಳನ್ನು ನೆಲ ಸಮ ಮಾಡಲಾಗಿದೆ.
ಅವಳಿ ಟವರ್ಸ್ ಇದ್ದ ಜಾಗದಲ್ಲಿ ಈಗ ಅವಶೇಷಗಳು ರಾಶಿ ರಾಶಿಯಾಗಿ ಬಿದ್ದಿದೆ. ಸುಮಾರು 88 ಸಾವಿರ ಟನ್‌ಗಳವರೆಗೆ ಅವಶೇಷ ಸೃಷ್ಟಿಯಾಗಿದೆ. ಕಟ್ಟಡವನ್ನು ನೆಲಸಮಗೊಳಿಸಲು ಸ್ಫೋಟಿಸಿದಾಗ, ಪೂರ್ತಿ ಟಾಪ್ ಫ್ಲೋರ್‌ವೊಂದು ಸಮೀಪದ ರೆಸಿಡೆನ್ಷಿಯಲ್ ಕಟ್ಟಡಕ್ಕೆ ಇನ್ನೇನು ತಾಗುವಷ್ಟು ಹತ್ತಿರದಲ್ಲಿ ಬಂದು ಬಿದ್ದಿದೆ! ಹತ್ತು ಮೀಟರ್ ಜಾರಿದ್ದರೆ ಪಕ್ಕದ ಕಟ್ಟಡಕ್ಕೂ ಹಾನಿಯಾಗುತ್ತಿತ್ತು.
ಅವಶೇಷ ಏನು ಮಾಡುತ್ತಾರೆ?
ಟ್ವಿನ್ ಟವರ್ಸ್ ನೆಲಸಮಗೊಳಿಸಿದ್ದರಿಂದ ಸುಮಾರು 55 ಸಾವಿರದಿಂದ 88 ಸಾವಿರ ಟನ್‌ಗಳವರೆಗೆ ಅವಶೇಷ ಸೃಷ್ಟಿಯಾಗಿದೆ. ಇದರಲ್ಲಿ ಕಾಂಕ್ರೀಟ್ ಹೆಂಟೆಗಳು, ಕಬ್ಬಿಣ ಮತ್ತು ಉಕ್ಕಿನ ಸರಳುಗಳೂ ಸೇರಿವೆ. ಅಧಿಕಾರಿಗಳ ಪ್ರಕಾರ, ಈ ಕಟ್ಟಡದ ಅವಶೇಷಗಳನ್ನು ತೆಗೆದು ಹಾಕಲು ಸುಮಾರು ಮೂರು ತಿಂಗಳು ಸಮಯ ಬೇಕಾಗುತ್ತದೆ. ಅವಶೇಷದ ಪೈಕಿ ಹೆಚ್ಚಿನ ಭಾಗವನ್ನು ಇಲ್ಲಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲಾಗುತ್ತದೆ. ಉಳಿದರುವ ಅವಶೇಷವನ್ನು ಟ್ವಿನ್ ಟವರ್‌ನ ಬೇಸ್‌ಮೆಂಟ್ ಪ್ರದೇಶದಲ್ಲೇ ಹುಗಿಯಲಾಗುತ್ತದೆ.
ಈಗ ಸೃಷ್ಟಿಯಾಗಿರುವ ಅವಶೇಷಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ. ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರವೇ ಈ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಅವಶೇಷ ನಿರ್ವಹಣೆ ಕುರಿತು ಎಡಿಫೈಸ್ ಎಂಜಿನಿಯರಿಂಗ್‌ನ ವರದಿಯನ್ನು ಪರಿಶೀಲಿಸುತ್ತಿರುವ ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಅಂತಿಮ ನಿರ್ಧಾರದ ಮೇಲೆ ಈ ಒಟ್ಟು ಕಾರ್ಯಚರಣೆ ನಡೆಯಲಿದೆ ಎದು ಹಿರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ | Twin Tower Demolished | ಅವಳಿ ಕಟ್ಟಡ ಕೆಡವಲು ಬಳಸಿದ ಸ್ಫೋಟಕಗಳು ಬ್ರಹ್ಮೋಸ್ನ 12 ಸಿಡಿತಲೆಗಳಿಗೆ ಸಮ !