ಹುಬ್ಬಳ್ಳಿ: ಆಸ್ಟ್ರೇಲಿಯಾ ದೇಶದ ವಶದಲ್ಲಿ ಅನಾಥರಂತೆ ಇದ್ದ ಕರ್ನಾಟಕ ರಾಜ್ಯದ ಇಬ್ಬರು ಮಕ್ಕಳನ್ನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹಾಗೂ ಆಗಿನ ವಿದೇಶಾಂಗ ಸಚಿವ ಜೈಶಂಕರ್ ಅವರ ಅವಿರತ ಪ್ರಯತ್ನದ ಫಲವಾಗಿ ಕೊನೆಗೂ ಧಾರವಾಡದ ಅಜ್ಜ-ಅಜ್ಜಿಯರ ಮಡಿಲು ಸೇರಿದ್ದಾರೆ.
ಆಗಿದ್ದೇನು…?
ಮೂಲತಃ ಧಾರವಾಡದವರೇ ಆಗಿರುವ ಲಿಂಗರಾಜ ಪಾಟೀಲ-ಪ್ರಿಯದರ್ಶಿನಿ ದಂಪತಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುತ್ತಾರೆ. ಅಲ್ಲೇ ಉದ್ಯೋಗದಲ್ಲಿ ಇರುತ್ತಾರೆ. ಈ ದಂಪತಿಗೆ ಅಮರ್ಥ್ಯ ಮತ್ತು ಅಪರಾಜಿತ ಎಂಬಿಬ್ಬರು ಮಕ್ಕಳು. ಮಗ ಅಮರ್ಥ್ಯ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅಲ್ಲಿನ ಆಸ್ಪತ್ರೆಗೆ ದಾಖಲಿಸುತ್ತಾರೆ. ಸೂಕ್ತ ಚಿಕಿತ್ಸೆ ಸಿಗಲಿಲ್ಲವೆಂದು ತಾಯಿ ಪ್ರಿಯದರ್ಶಿನಿ ಕಾನೂನು ಹೋರಾಟ ನಡೆಸುತ್ತಾರೆ. ತನಿಖೆ ನಡೆಸಿದ ಆಸ್ಟ್ರೇಲಿಯಾ ಸರ್ಕಾರ ತಾಯಿಯೇ ಮಕ್ಕಳನ್ನು ಸರಿ ಪೋಷಣೆ ಮಾಡುತ್ತಿಲ್ಲ ಎಂದು ಹೇಳಿ ಮಕ್ಕಳನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.
ಇದರಿಂದ ಬೇಸತ್ತ ಪ್ರಿಯದರ್ಶಿನಿ ಹತಾಶಳಾಗಿ, ಮಕ್ಕಳು ದೂರವಾಗಿದ್ದರಿಂದ ತೀವ್ರ ಮನನೊಂದು ಕಳೆದ ಆಗಸ್ಟ್ ನಲ್ಲಿ ಧಾರವಾಡಕ್ಕೆ ಮರಳಿ ಆತ್ಮಹತ್ಯೆ ಮಾಡ್ಕೊಳ್ಳುತ್ತಾರೆ. ಆಸ್ಟ್ರೇಲಿಯಾ ಸರ್ಕಾರ ಕೆಲ ಕಾನೂನು ತೊಡಕುಗಳಿವೆ ಎಂದು ಹೇಳಿ ತಾಯಿ ಅಂತಿಮ ದರ್ಶನ, ಅಂತ್ಯ ಸಂಸ್ಕಾರಕ್ಕೂ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.
ಇದನ್ನೂ ಓದಿ: Book Brahma Lit Fest: ಬೆಂಗಳೂರಿನಲ್ಲಿ ಆ.9ರಿಂದ 3 ದಿನಗಳ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ -2024’
ಭಾರತಕ್ಕೆ ಮಕ್ಕಳ ಮರಳಿ ಕರೆತರುವಲ್ಲಿ ಜೋಶಿ ಯಶಸ್ವಿ
ಧಾರವಾಡದಲ್ಲಿ ಇದ್ದ ಪ್ರಿಯದರ್ಶಿನಿ ಕುಟುಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮೊರೆ ಹೋಗುತ್ತದೆ. ಜೋಶಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರ ಮೂಲಕ ಆಸ್ಟ್ರೇಲಿಯಾ ಸರ್ಕಾರದ ಜತೆ ಸಂಪರ್ಕ ಸಾಧಿಸಿ ಅಂತೂ ಇಬ್ಬರೂ ಮಕ್ಕಳನ್ನು ಭಾರತಕ್ಕೆ ಕರೆ ತಂದಿದ್ದಾರೆ. ಅವಿರತ ಪ್ರಯತ್ನ ನಡೆಸಿ ಮೊಮ್ಮಕ್ಕಳನ್ನು ಅಜ್ಜ-ಅಜ್ಜಿಯರ ಮಡಿಲಿಗೆ ಹಾಕುವಲ್ಲಿ ಸಚಿವ ಪ್ರಲ್ಹಾದ್ ಜೋಶಿ ಯಶಸ್ವಿಯಾಗಿದ್ದಾರೆ.
ಸಚಿವ ಜೋಶಿಗೆ ಅಭಿನಂದನೆ
ಪ್ರೊ. ದೇಸಾಯಿಯವರ ಕುಟುಂಬ ಹಾಗೂ ಅವರ ಮೊಮ್ಮಕ್ಕಳು ಇಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರನ್ನು ಭೇಟಿ ಮಾಡಿ ಸಹಾಯಕ್ಕೆ ಧನ್ಯವಾದ ಅರ್ಪಿಸಿದರು. ಮೊಮ್ಮಕ್ಕಳನ್ನು ಕಾಪಾಡಿದ್ದೀರಿ. ಇದಕ್ಕೆ ನಾವು ಚಿರಋಣಿ ಎಂದು ಅಭಿನಂದನೆ ಸಲ್ಲಿಸಿದರು.
ಜೋಶಿ ಅವರಿರದಿದ್ದರೆ ಮೊಮ್ಮಕ್ಕಳು ಸಿಗುತ್ತಿರಲಿಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ದೇಸಾಯಿಯವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇರದಿದ್ದರೆ ನಮ್ಮ ಮೊಮ್ಮಕ್ಕಳು ಇಂದು ನಮ್ಮ ಮಡಿಲು ಸೇರುತ್ತಿರಲಿಲ್ಲ ಎಂದು ಕಣ್ತುಂಬಿಕೊಂಡರು. ಮಗಳ ಅಂತ್ಯಕ್ರಿಯೆ ವೇಳೆ ಮಾತು ಕೊಟ್ಟಂತೆ ಮೊಮ್ಮಕ್ಕಳನ್ನು ಕರೆತಂದು ಮಗಳ ಆತ್ಮಕ್ಕೆ ಚಿರಶಾಂತಿ ನೀಡಿದ್ದಾರೆ ಎಂದು ಹೇಳಿದರು.
ಪ್ರಾಮಾಣಿಕ ಕರ್ತವ್ಯ ಮಾಡಿದ್ದೇನೆ ಅಷ್ಟೇ
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಾಮಾಣಿಕವಾಗಿ ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ. ಪ್ರಿಯದರ್ಶಿನಿ ಅವರ ಸಾವಾದಾಗ ಮಕ್ಕಳು ಆಸ್ಟ್ರೇಲಿಯಾದಲ್ಲಿ ಇದ್ದರು. ಭಾರತಕ್ಕೆ ಕರೆ ತರಲು ಕೆಲವು ಕಾನೂನು ತೊಡಕುಗಳಿದ್ದವು. ಹೀಗಾಗಿ ಹಿಂದಿನ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಾಗಿತ್ತು. ಭಾರತದ ಹೈಕಮೀಶನ್ ಹಾಗೂ ಆಸ್ಟ್ರೇಲಿಯಾದ ಹೈಕಮೀಶನ್ ಜತೆ ಮಾತುಕತೆ ನಡೆಸುವ ಮೂಲಕ ಇದೀಗ ಅಡೆತಡೆಗಳನ್ನೆಲ್ಲ ನಿವಾರಿಸಿ ಮಕ್ಕಳಿಬ್ಬರನ್ನು ಮರಳಿ ಕರೆ ತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: India tour of Sri Lanka : ಶ್ರೀಲಂಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಹೊಸ ವೇಳಾಪಟ್ಟಿ
ಈ ಸಂದರ್ಭದಲ್ಲಿ ಪ್ರೊ ಮಲ್ಲಿಕಾರ್ಜುನ ಪಾಟೀಲ, ಡಾ.ಎಸ್.ಆರ್. ರಾಮನಗೌಡರ, ಸಿ.ಎಸ್. ಪಾಟೀಲ ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗು ದೇಸಾಯಿ ಕುಟುಂಬ ವರ್ಗದವರು ಉಪಸ್ಥಿತರಿದ್ದರು.