ರಾಂಚಿ: ಆಂಧ್ರಪ್ರದೇಶದಲ್ಲಿ ರೈಲು ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ವಿದ್ಯುತ್ ತಂತಿಯು ರೈಲಿನ ಮೇಲೆ ಬಿದ್ದಿದ್ದು (Train Accident), ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ರೈಲಿನ ಮೇಲೆ ವಿದ್ಯುತ್ ತಂತಿ ಬಿದ್ದ ಕಾರಣ ಕೂಡಲೇ ರೈಲು ಸಂಚಾರ ಸ್ಥಗಿತವಾಗಿದೆ. ಆಗ ಉಂಟಾದ ಎಳೆತದ (Jerk) ತೀವ್ರತೆಗೆ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೊಡೆರ್ಮಾ ಜಿಲ್ಲೆಯ ಪರ್ಸಾಬಾದ್ ಬಳಿಯ ಗೊಮೊಹ್ ಹಾಗೂ ಕೊಡೆರ್ಮಾ ರೈಲು ನಿಲ್ದಾಣದ ಮಧ್ಯ ಅಪಘಾತ ಸಂಭವಿಸಿದೆ. ಪುರಿಯಿಂದ ದೆಹಲಿಗೆ ತೆರಳುತ್ತಿದ್ದ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದಿದೆ. ಆಗ ರೈಲಿನ ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆ. ಇದರಿಂದಾಗಿ ಜರ್ಕ್ ಉಂಟಾಗಿದ್ದು, ಹೆಚ್ಚಿನ ಪ್ರಯಾಣಿಕರು ಇದ್ದ ಕಾರಣ ತೀವ್ರತೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಕಾಏಕಿ ರೈಲು ನಿಂತ ಕಾರಣ ಪ್ರಯಾಣಿಕರು ಕೆಳಗೆ ಇಳಿಯಲು ಯತ್ನಿಸಿದ್ದು, ಇದೇ ವೇಳೆ ನೂಕುನುಗ್ಗಲು ಉಂಟಾಗಿದೆ.
Purushottam Express pic.twitter.com/yV8s90XLlj
— HUNTER (@HuntToYou) November 11, 2023
“ವಿದ್ಯುತ್ ತಂತಿ ಕಡಿದು ಬಿದ್ದ ಕಾರಣ ಕೂಡಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಆಗ ಚಾಲಕ ಎಮರ್ಜನ್ಸಿ ಬ್ರೇಕ್ ಹಾಕಿದ್ದಾರೆ. ಗಂಟೆಗೆ ಸುಮಾರು 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಂಚಾರ ಏಕಾಏಕಿ ಸ್ಥಗಿತಗೊಂಡ ಕಾರಣ ಜರ್ಕ್ ಉಂಟಾಗಿದೆ. ಕೆಲವು ಜನರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಧನ್‌ಬಾದ್ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಮ್ಯಾನೇಜರ್ ಅಮರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಬಳಿಕ ಡೀಸೆಲ್ ಎಂಜಿನ್ ಅಳವಡಿಸಿದ್ದು, ರೈಲು ಸಂಚಾರ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Andhra train accident: 13 ಜನರ ಬಲಿ ಪಡೆದ ಆಂಧ್ರ ರೈಲು ಅಪಘಾತದ ಮೂಲ ಕಾರಣ ಬಹಿರಂಗ
ಕೆಲ ದಿನಗಳ ಹಿಂದಷ್ಟೇ ಆಂಧ್ರಪ್ರದೇಶದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ 13 ಜನ ಮೃತಪಟ್ಟಿದ್ದರು. ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದ ಎರಡು ರೈಲುಗಳ ಡಿಕ್ಕಿಯಲ್ಲಿ 50 ಮಂದಿ ಗಾಯಗೊಂಡಿದ್ದರು. ವಿಶಾಖಪಟ್ಟಣದಿಂದ ರಾಯಗಢಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ವಿಜಯನಗರದಲ್ಲಿ ಹಳಿ ತಪ್ಪಿತ್ತು. ರೈಲು ಅಪಘಾತದ ಕಾರಣವನ್ನು ರೈಲ್ವೇ ಇಲಾಖೆ ಬಹಿರಂಗಪಡಿಸಿದೆ. ರಾಯಗಢಕ್ಕೆ ತೆರಳುತ್ತಿದ್ದ ರೈಲು ನಿಲುಗಡೆಗೆ ಸಿಗ್ನಲ್ ನೀಡಿದರೂ ಗಮನಿಸದೆ ಮುಂದೆ ಹೋಗಿದ್ದೇ ದುರಂತಕ್ಕೆ ಮೂಲ ಕಾರಣ ಎಂದು ತಿಳಿದುಬಂದಿದೆ.
ಈ ವರ್ಷದ ಜೂನ್ 2ರಂದು ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 288 ಜನರು ಸಾವನ್ನಪ್ಪಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿನ ದೋಷದಿಂದ ಈ ದುರಂತ ಸಂಭವಿಸಿತ್ತು.