ನವದೆಹಲಿ: ಸುಪ್ರೀಂ ಕೋರ್ಟ್‌ಗೆ (Supreme Court) ಐವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ ವಾರದಲ್ಲೇ ಮತ್ತಿಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳನ್ನು ಹೊಂದಿದಂತಾಗಿದೆ. ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್ ರಾಜೇಶ್ ಬಿಂದಾಲ್, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಗಿದೆ.
ಭಾರತೀಯ ಸಂವಿಧಾನದ ಅನುಸಾರ ರಾಷ್ಟ್ರಪತಿಗಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಇಬ್ಬರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದಾರೆ. ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಅರವಿಂದ್ ಕುಮಾರ್ ಅವರಿಗೆ ಶುಭಾಶಯಗಳು ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಟ್ವೀಟ್ ಮಾಡಿದ್ದಾರೆ. ಈ ಇಬ್ಬರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಜನವರಿ 31ರಂದು ಶಿಫಾರಸು ಮಾಡಿತ್ತು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಕೊಲಿಜಿಯಂ ಕಳೆದ ಡಿಸೆಂಬರ್ 13ರಂದು ಐವರ ಹೆಸರುಗಳನ್ನು ಶಿಫಾರಸು ಮಾಡಿತ್ತು. ಆದರೆ, ಈ ಹೆಸರುಗಳಿಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರ ಸುಮಾರು 2 ತಿಂಗಳು ಕಾಲಾವಕಾಶ ತೆಗೆದುಕೊಂಡಿತು. ಇದರಿಂದಾಗಿ ನ್ಯಾಯಾಂಗ ನೇಮಕಾತಿಗಳ ವಿಷಯಕ್ಕೆ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Judges Appointment: ಬಿಕ್ಕಟ್ಟಿನ ಮಧ್ಯೆಯೇ ಸುಪ್ರೀಂ ಕೋರ್ಟ್‌ಗೆ ಐವರು ಜಡ್ಜ್‌ಗಳ ನೇಮಕಕ್ಕೆ ಕೇಂದ್ರ ಅಸ್ತು
ವಾರದ ಹಿಂದೆ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿತ್ತಲ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜಯ್ ಕರೋಲ್, ಮಣಿಪುರ ಹೈಕೋರ್ಟ್ ಹೈಕೋರ್ಟ್ ಮುಕ್ಯ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ್ದರು.