ನವದೆಹಲಿ: ಸಲಿಂಗ ವಿವಾಹ (Same-sex Marriage) ಕುರಿತು ಕೇಂದ್ರ ಸರ್ಕಾರವು ನ್ಯಾಯಾಲಯದಲ್ಲಿ ತನ್ನ ನಿಲುವು ತಿಳಿಸುವ ಮೊದಲೇ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರೊಬ್ಬರು ಈ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಕೇವಲ ಇಬ್ಬರು ನ್ಯಾಯಾಧೀಶರು ಕುಳಿತು ಸಲಿಂಗ ವಿವಾಹ ಮಾನ್ಯತೆಯ ಬಗ್ಗೆ ಚರ್ಚಿಸಲಾಗದು ಎಂದು ಬಿಜೆಪಿ ಸಂಸದ ಸುಶೀಲ್ ಮೋದಿ ಅವರು ಹೇಳಿದ್ದಾರೆ.
ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ ಸುಶೀಲ್ ಮೋದಿ ಅವರು, ಕೆಲವು ಎಡ ಸಿದ್ಧಾಂತ ಕಾರ್ಯಕರ್ತರು ಸಲಿಂಗ ಮದುವೆಗೆ ಕಾನೂನು ಮಾನ್ಯತೆಯನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ದೇಶದ ನೈತಿಕ ನೀತಿಗಳಿಗೆ ವಿರುದ್ಧವಾದ ಯಾವುದೇ ನಿರ್ಣಯವನ್ನು ನ್ಯಾಯಾಂಗವು ತೆಗೆದುಕೊಳ್ಳಬಾರದು ಎಂದು ಹೇಳಿದರು.
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವುದನ್ನು ನಾನು ವಿರೋಧಿಸುತ್ತೇನೆ. ಭಾರತದಲ್ಲಿ ಸಲಿಂಗ ಮದುವೆಗೆ ಯಾವುದೇ ಮಾನ್ಯತೆ ಇಲ್ಲ ಅಥವಾ ಮುಸ್ಲಿಮ್ ವೈಯಕ್ತಿಕ ಕಾನೂನು ಅಥವಾ ಇನ್ನಾವುದೇ ಕಾನೂನಿನಲ್ಲಿ ಈ ಬಗ್ಗೆ ಮಾನ್ಯತೆ ಇಲ್ಲ. ಒಂದೊಮ್ಮೆ ಸಲಿಂಗ ಮದುವೆಗೆ ಮಾನ್ಯತೆ ನೀಡಿದರೆ, ದೇಶದಲ್ಲಿ ವೈಯಕ್ತಿಕ ಕಾನೂನುಗಳ ನಡುವಿನ ಸಮತೋಲನ ತಪ್ಪಿ ಹೋಗಲಿದೆ ಎಂದು ಹೇಳಿದ್ದಾರೆ.
ಕೇವಲ ಇಬ್ಬರು ನ್ಯಾಯಾಧೀಶರು ಈ ಸಾಮಾಜಿಕ ಸಮಸ್ಯೆ (ಸಲಿಂಗ ಮದುವೆ)ಯ ಕುರಿತು ನಿರ್ಧರಿಸಲಾಗದು. ಈ ಬಗ್ಗೆ ಸಂಸತ್ತು ಮತ್ತು ಸಮಾಜದಲ್ಲಿ ವ್ಯಾಪಕವಾಗಿ ಚರ್ಚೆಯಾಗಬೇಕು ಎಂದು ಬಿಹಾರದ ಡಿಸಿಎಂ ಕೂಡ ಆಗದ್ದ ಸಂಸದ ಸುಶೀಲ್ ಮೋದಿ ಅವರು ಹೇಳಿದ್ದಾರೆ.
ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ 2018ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಸಲಿಂಗ ಲೈಂಗಿಕ ಮೇಲಿನ ನಿಷೇಧವನ್ನು ರದ್ದು ಮಾಡಿ, ಅಪರಾಧಿಕರಣವನ್ನು ತೆಗೆದು ಹಾಕಿತ್ತು. ಹಾಗಿದ್ದೂ, ಎಲ್‌ಜಿಬಿಟಿ ಕಾರ್ಯಕರ್ತರು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ದಕ್ಕಿಸಿಕೊಳ್ಳಲು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ | Same-Sex Marriage | ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಏಕಿಲ್ಲ? ಕೇಂದ್ರಕ್ಕೆ ಸುಪ್ರೀಂ ನೋಟಿಸ್