Site icon Vistara News

Manipur Horror: ಮಣಿಪುರ ವಿದ್ಯಾರ್ಥಿಗಳ ಭೀಕರ ಹತ್ಯೆ; ನಾಲ್ವರನ್ನು ಬಂಧಿಸಿದ ಸಿಬಿಐ, ಇಬ್ಬರು ವಶಕ್ಕೆ

Manipur Couple Murder

ನವದೆಹಲಿ: ಮಣಿಪುರದ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆಗೆ (Manipur Students Killed) ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ(CBI) ನಾಲ್ವರು ಆರೋಪಿಗಳನ್ನು ಬಂಧಿಸಿ(4 people Arrested), ಇಬ್ಬರುನ್ನ ವಶಕ್ಕೆ ಪಡೆದುಕೊಂಡಿದೆ. ಜುಲೈನಲ್ಲಿ ಕಾಣೆಯಾಗಿದ್ದ ಇಬ್ಬರ ವಿದ್ಯಾರ್ಥಿಗಳ ಹತ್ಯೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆದ ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು(Photo Viral). ಈ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಈ ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ವಹಿಸಿತ್ತು. ಬಂಧಿತ ನಾಲ್ವರ ಪೈಕಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ. ಅಲ್ಲದೇ ಇಬ್ಬರು ಹುಡುಗಿಯರನ್ನು ವಶಕ್ಕೆ ಪಡೆಯಲಾಗಿದೆ.

ಮಣಿಪುರದಲ್ಲಿ ಮೇ 3ರಿಂದ ಜನಾಂಗೀಯ ಸಂಘರ್ಷ ಶುರುವಾಗಿದ್ದು, ಪೊಲೀಸರು ಮತ್ತು ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಗುಡ್ಡಗಾಡು ಪ್ರದೇಶದ ಜಿಲ್ಲೆ ಚುರಾಚಂದಪುರದಿಂದ ನಾಲ್ವರನ್ನು ಬಂಧಿಸಿದ್ದಾರೆ. ಈ ಜಿಲ್ಲೆ ಮಣಿಪುರ ರಾಜಧಾನಿ ಇಂಫಾಲ್‌ನಿಂದ 51 ಕಿ ಮೀ ದೂರದಲ್ಲಿದೆ.

ತ್ವರಿತ ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ಮತ್ತು ಸೇನೆಯು ಅವರನ್ನು ಕೂಡಲೇ ಸಿಬಿಐ ಟೀಂ ಕಾಯುತ್ತಿದ್ದ ವಿಮಾನ ನಿಲ್ದಾಣಕ್ಕೆ ಕರೆ ತಂದಿತು. ಬಳಿಕ ಆರೋಪಿಗಳೊಂದಿಗೆ ಸಿಬಿಐ ತಂಡವು ಭಾನುವಾರದ ಕೊನೆಯ ವಿಮಾನ ಮೂಲಕ ಅವರನ್ನು ವಾಪಸ್ ಇಂಫಾಲ್‌ಗೆ ಕರೆದುಕೊಂಡು ಹೋಯಿತು. ಈ ಬಂಧನ ಗೊತ್ತಾಗುತ್ತಿದ್ದಂತೆ ಜನರು ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಫಿಜಾಮ್ ಹೇಮಂಜಿತ್ ಮತ್ತು ಹಿಜಾಮ್ ಲಿಂತೋಯಿಂಗಂಬಿ ಅವರ ಅಪಹರಣ ಮತ್ತು ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಇಂದು ಚುರಾಚಂದ್‌ಪುರದಿಂದ ಬಂಧಿಸಲಾಗಿದೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಎಕ್ಸ್‌ ವೇದಿಕೆಯಲ್ಲಿ ತಿಳಿಸಿದ್ದಾರೆ.

ಅಪರಾಧ ಎಸಗಿದ ನಂತರ ತಲೆಮರೆಸಿಕೊಳ್ಳಬಹುದು. ಆದರೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಗಾದೆ ಮಾತಿದೆ. ಅದರಂತೆ, ಈಗ ಸೆರೆ ಸಿಕ್ಕಿರುವ ಆರೋಪಿಗಳ ಅಪರಾಧಕ್ಕೆ ಮರಣದಂಡನೆ ಸೇರಿದಂತೆ ಗರಿಷ್ಠ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಮಣಿಪುರ ಸಿಎಂ ತಿಳಿಸಿದ್ದಾರೆ.

ಏನಿದು ಘಟನೆ?

ಈ ಸುದ್ದಿಯನ್ನೂ ಓದಿ: Manipur Violence: ಮಣಿಪುರ ಹಿಂಸೆಗೆ ವಿದೇಶಿ ಉಗ್ರರ ಪಿತೂರಿ; ಒಬ್ಬ ಶಂಕಿತ ಉಗ್ರನ ಬಂಧಿಸಿದ ಎನ್‌ಐಎ!

ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಅವರು ಕಳೆದ ಜುಲೈನಲ್ಲಿ ಕಾಣೆಯಾಗಿದ್ದರು. ಆದರೆ ಇವರಿಬ್ಬರು ಹತ್ಯೆಯಾದ ಫೋಟೋ ವಾರದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಫೋಟೋದಲ್ಲಿ ಕಂಡುಬರುತ್ತಿದೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್‌ ಶರ್ಟ್ ಧರಿಸಿರುವುದು ಕಂಡುಬಂದಿದೆ. ಅವರ ಹಿಂದೆ ಬಂದೂಕುಗಳನ್ನು ಹೊಂದಿರುವ ಇಬ್ಬರು ಪುರುಷರು ಸ್ಪಷ್ಟವಾಗಿ ಗೋಚರಿಸುತ್ತಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬರುತ್ತಿದೆ.

ಈ ಪ್ರಕರಣವು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಭಾರಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಪ್ರಕರಣವನ್ನು ಭೇದಿಸಲು ಪೊಲೀಸರು ಯಾಕೆ ತಡ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಯೂ ಎದ್ದಿತ್ತು. ಜುಲೈನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಅಂದು ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಕಾಣಿಸಿಕೊಂಡ ಬಳಿಕ ಇವರ ಪತ್ತೆಯಾಗಿರಲಿಲ್ಲ. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಐ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version