Site icon Vistara News

Maoists Killed: ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲರ ಹತ್ಯೆ; ಚುನಾವಣೆ ಮೊದಲೇ ಭರ್ಜರಿ ಬೇಟೆ

Naxals

Seven Naxalites killed, three jawans injured in encounter in Chhattisgarh

ರಾಯ್‌ಪುರ: ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಮಾವೋವಾದಿಗಳ ಉಪಟಳ ಹೆಚ್ಚಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ನಕ್ಸಲ್‌ ಪೀಡಿತ ಬಸ್ತಾರ್‌ (Bastar) ಪ್ರದೇಶದ ಕಾಂಕೆರ್‌ (Kanker) ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯು ಮಾವೋವಾದಿಗಳನ್ನು ನಿಗ್ರಹಿಸಲು ಕಾರ್ಯಾಚರಣೆ ಕೈಗೊಂಡಿದ್ದು, ಇದೇ ವೇಳೆ ಇಬ್ಬರು ಮಾವೋವಾದಿಗಳನ್ನು (Maoists Killed) ಹೊಡೆದುರುಳಿಸಿದ್ದಾರೆ.

“ಕೊಯಲಿಬೆಡ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಬಿಎಸ್‌ಎಫ್ ಜಿಲ್ಲಾ ಮೀಸಲು ದಳದ (DRG) ಸಿಬ್ಬಂದಿಯು ಶನಿವಾರ (ಅಕ್ಟೋಬರ್‌ 21) ಬೆಳಗ್ಗೆ‌ ಜಂಟಿಯಾಗಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಮಾವೋವಾದಿಗಳು ಗುಂಡು ಹಾರಿಸಿದ್ದಾರೆ. ಆದರೆ, ಮುನ್ನಡೆ ಸಾಧಿಸಿದ ಭದ್ರತಾ ಸಿಬ್ಬಂದಿಯು ಇಬ್ಬರು ನಕ್ಸಲರನ್ನು ಹೊಡೆದುರುಳಿಸಿದ್ದಾರೆ” ಎಂದು ಕಾಂಕೆರ್‌ ಎಸ್‌ಪಿ ದಿವ್ಯಾಂಗ್‌ ಪಟೇಲ್‌ ಮಾಹಿತಿ ನೀಡಿದರು.

ಇಬ್ಬರೂ ನಕ್ಸಲರ ಶವಗಳನ್ನು ಭದ್ರತಾ ಸಿಬ್ಬಂದಿಯು ವಶಪಡಿಸಿಕೊಂಡಿದ್ದಾರೆ. ಆದರೆ, ಅವರ ಕುರಿತು ಹೆಚ್ಚನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ನಕ್ಸಲರಿಂದ ಒಂದು ಇನ್ಸಾಸ್‌ ರೈಫಲ್‌, 12 ಬೋರ್‌ ರೈಫಲ್‌ಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹೆಚ್ಚಿನ ನಕ್ಸಲರು ಅಡಗಿರುವ ಕಾರಣ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: IED Recovered: ಬಿಹಾರದ ಮಾವೋವಾದಿ ಪ್ರಾಬಲ್ಯದ ಪ್ರದೇಶದಲ್ಲಿ 162 ಸ್ಫೋಟಕ ವಶ, ತಪ್ಪಿದ ಭಾರಿ ಅನಾಹುತ

ರಾಜ್ಯದಲ್ಲಿ ಬಿಗಿ ಬಂದೋಬಸ್ತ್‌

ಛತ್ತೀಸ್‌ಗಢದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ನಕ್ಸಲರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಬಸ್ತಾರ್‌, ಸುಕ್ಮಾ ಸೇರಿ ಹಲವು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು, ಜಿಲ್ಲಾ ಮೀಸಲು ದಳ, ಬಿಎಸ್‌ಎಫ್‌ ಸೇರಿ ಹಲವು ಸಿಬ್ಬಂದಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಛತ್ತೀಸ್‌ಗಢದ ಮುಂತಾದ ಪ್ರದೇಶಗಳು ನಕ್ಸಲ್‌ಪೀಡಿತ ಆಗಿರುವ ಕಾರಣ ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್‌ 7ರಂದು ಮೊದಲ ಹಂತದಲ್ಲಿ ಮತದಾನ ನಡೆದರೆ, ಎರಡನೇ ಹಂತದ ಮತದಾನವು ನವೆಂಬರ್‌ 17ರಂದು ನಡೆಯಲಿದೆ. ಡಿಸೆಂಬರ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

Exit mobile version