Site icon Vistara News

Uttarkashi Tunnel: ಇನ್ನು 2 ಮೀಟರ್‌ ಕೊರೆದರೆ 41 ಜನ ಸೇಫ್‌; ಎನ್‌ಡಿಎಂಎ ಮಹತ್ವದ ಅಪ್‌ಡೇಟ್

Uttarkashi Tunnel Rescue Operation

Two Metres Remaining In Uttarkashi Tunnel; Rescue Operation Is At Last Leg

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿ ಸುರಂಗದಲ್ಲಿ (Uttarkashi Tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆಯು ಕೊನೆಯ ಹಂತ ತಲುಪಿದೆ. ರ‍್ಯಾಟ್‌ ಹೋಲ್‌ ಮೈನಿಂಗ್‌ (Rat Hole Mining) ಮೂಲಕ ಸುಮಾರು 58 ಮೀಟರ್‌ ಸುರಂಗವನ್ನು ಕೊರೆಯಲಾಗಿದ್ದು, ಇನ್ನು ಎರಡೇ ಮೀಟರ್‌ ಬಾಕಿ ಇದೆ. ಎರಡು ಮೀಟರ್‌ ಕೊರೆದರೆ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಸದಸ್ಯ ಲೆಫ್ಟಿನೆಂಟ್‌ ಜನರಲ್‌ (ನಿವೃತ್ತ) ಸೈಯದ್‌ ಅಟಾ ಹಸ್ನೈನ್‌ ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, “ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತರುವುದು ನಮ್ಮ ಕರ್ತವ್ಯವಾಗಿದೆ. ಇದುವರೆಗೆ 58 ಮೀಟರ್‌ ಕೊರೆಯಲಾಗಿದೆ. ಇನ್ನೂ ಎರಡು ಮೀಟರ್‌ ಕೊರೆಯುವುದು ಬಾಕಿ ಇದೆ. ಈಗಾಗಲೇ ನಾವು ಕಾರ್ಮಿಕರ ಸಮೀಪ ತೆರಳಿದ್ದೇವೆ. ಕಾರ್ಮಿಕರ ಧ್ವನಿಯು ನಮಗೆ ಕೇಳುತ್ತಿದೆ. ಸ್ವಲ್ಪ ವಿಳಂಬವಾದರೂ ಪರವಾಗಿಲ್ಲ, ಎಲ್ಲ ಕಾರ್ಮಿಕರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆಯಾಗಿದೆ” ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉತ್ತರಕಾಶಿ ಸುರಂಗದಲ್ಲಿಯೇ ತಾತ್ಕಾಲಿಕವಾಗಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅಲ್ಲದೆ, ಏಮ್ಸ್‌ ವೈದ್ಯರ ನಾಲ್ಕು ತಂಡಗಳು ಸುರಂಗದ ಬಳಿಯೇ ಬೀಡುಬಿಟ್ಟಿವೆ. ಯಾವಾಗ ಬೇಕಾದರೂ ಜನರನ್ನು ಹೊರಗೆ ಕರೆತರುವ ಸಾಧ್ಯತೆ ಇರುವುದರಿಂದ ಅವರ ಆರೋಗ್ಯವನ್ನು ಕ್ಷಿಪ್ರವಾಗಿ ತಪಾಸಣೆ ಮಾಡಲು ಸುರಂಗದಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಸುರಂಗದ ಹೊರಗೆ ಸುಮಾರು 16 ಆಂಬುಲೆನ್ಸ್‌ಗಳು ಕಾಯುತ್ತಿದ್ದು, ತಪಾಸಣೆ ಬಳಿಕ ಅವರನ್ನು ಬೇರೊಂದು ಆಸ್ಪತ್ರೆಗೆ ಸಾಗಿಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Uttarkashi Tunnel: ಸುರಂಗದಲ್ಲಿರುವ ಎಲ್ಲ 41 ಜನ ಸೇಫ್;‌ ಕೆಲವೇ ಕ್ಷಣದಲ್ಲಿ ಎಲ್ಲರ ರಕ್ಷಣೆ

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ. ಕೊನೆಗೆ 17 ದಿನಗಳ ಬಳಿಕ ಎಲ್ಲ ಕಾರ್ಮಿಕರ ರಕ್ಷಣೆಯು ಕೊನೆಯ ಹಂತ ತಲುಪಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version