ಮುಂಬೈ: 26/11ರ ಮಾದರಿಯಲ್ಲಿಯೇ (Mumbai Terror Attack) ಮುಂಬೈನಲ್ಲಿರುವ ತಾಜ್ ಹೋಟೆಲ್ ಮೇಲೆ ಪಾಕಿಸ್ತಾನದ ಇಬ್ಬರು ಉಗ್ರರು ಬಾಂಬ್ ದಾಳಿ ನಡೆಸಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ (Threat Call) ಬಂದಿದೆ. ಹಾಗಾಗಿ, ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಬೈ ಪೊಲೀಸ್ ಮುಖ್ಯ ಕಂಟ್ರೋಲ್ ರೂಮ್‌ಗೆ ಬೆದರಿಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಮುಕೇಶ್ ಸಿಂಗ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯು, “ಪಾಕಿಸ್ತಾನದ ಇಬ್ಬರು ನಾಗರಿಕರು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಲಿದ್ದಾರೆ. ಇದಾದ ಬಳಿಕ ಅವರು ಬಾಂಬ್ ದಾಳಿ ಮೂಲಕ ತಾಜ್ ಹೋಟೆಲ್‌ಅನ್ನು ಉಡಾಯಿಸಲಿದ್ದಾರೆ” ಎಂಬುದಾಗಿ ತಿಳಿಸಿದ್ದಾನೆ. ಇನ್ನು ಕಾಲ್ ಮಾಡಿದ ನಂಬರ್‌ಅನ್ನು ಪೊಲೀಸರು ಟ್ರೇಸ್ ಮಾಡಿದ್ದು, ಉತ್ತರ ಪ್ರದೇಶದ ಗೊಂಡಾ ಮೂಲದ ಜಗದಂಬಾ ಪ್ರಸಾದ್ ಸಿಂಗ್ ಎಂಬಾತ ಕರೆ ಮಾಡಿದ್ದಾನೆ ಹಾಗೂ ಆತ ಸ್ಯಾಂಟಾಕ್ರೂಸ್‌ನಲ್ಲಿ ವಾಸಿಸುತ್ತಿದ್ದಾನೆ ಎಂಬುದು ಗೊತ್ತಾಗಿದೆ.
ಮುಂಬೈ ಮಂತ್ರಾಲಯಕ್ಕೂ ಬೆದರಿಕೆ ಕರೆ
ಮುಂಬೈನಲ್ಲಿರುವ ರಾಜ್ಯ ಸರ್ಕಾರದ ‘ಮಂತ್ರಾಲಯ’ ಕಚೇರಿಗೂ (Secretariat) ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಗುರುವಾರ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ಪರಿಶೀಲನೆ ನಡೆಸಿದೆ. ಆದರೆ, ಕುಡಿದ ಮತ್ತಿನಲ್ಲಿ ಮುಂಬೈನ ಅಹ್ಮದ್ ನಗರದ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ದಾಳಿ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಬಳಿಕ ಗೊತ್ತಾಗಿದೆ. ಶ್ವಾನ ದಳವೂ ಮಂತ್ರಾಲಯದಲ್ಲಿ ಪರಿಶೀಲನೆ ನಡೆಸಿತು ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Vistara Airlines: ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ; ಪ್ರಯಾಣಿಕರಿಗೆ ಭೀತಿ, ಸಿಬ್ಬಂದಿಗೆ ಫಜೀತಿ
ಮುಂಬೈನಲ್ಲಿರುವ ತಾಜ್ ಹೋಟೆಲ್ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ.