ರಾಯ್ಪುರ: ಛತ್ತೀಸ್‌ಗಢ ಸರ್ಕಾರಕ್ಕೆ ಸೇರಿದ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಸುಮಾರು 9.10ರ ಹೊತ್ತಿಗೆ ರಾಯ್ಪುರದ ಸ್ವಾಮಿ ವಿವೇಕಾನಂದ ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದೆ. ಈ ಹೆಲಿಕಾಪ್ಟರ್ ಎಂದಿನಂತೆ ತರಬೇತಿ ಹಾರಾಟದಲ್ಲಿ ತೊಡಗಿತ್ತು. ತಾಂತ್ರಿಕ ದೋಷವೇ ಪತನಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪೈಲಟ್‌ಗಳಾದ ಕ್ಯಾಪ್ಟನ್ ಗೋಪಾಲ ಕೃಷ್ಣ ಪಾಂಡಾ ಮತ್ತು ಕ್ಯಾ.ಎ.ಪಿ.ಶ್ರೀವಾಸ್ತವಾ ಮೃತರು. ಅಪಘಾತದಲ್ಲಿ ಇವರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಇಬ್ಬರೂ ಬದುಕುಳಿಯಲಿಲ್ಲ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್‌ವಾಲ್ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟ ಬಗ್ಗೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ರಾಯ್ಪುರ ಏರ್‌ಪೋರ್ಟ್‌ನಲ್ಲಿ ನಡೆದ ದುರಂತದ ಬಗ್ಗೆ ಕೇಳಿ ತುಂಬ ಬೇಸರವಾಯಿತು. ನಮ್ಮ ಪೈಲಟ್‌ಗಳಾದ ಪಾಂಡಾ ಮತ್ತು ಶ್ರೀವಾಸ್ತವ್ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ. ಈ ನೋವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ಭಗವಂತ ನೀಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು: ಹೆಲಿಕಾಪ್ಟರ್ ಕಾರ್ಯಾಚರಣೆ